ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮತದಾರರ ಹಿಡಿಶಾಪ: ಪಾಟೀಲ

ಇತ್ತೀಚಿನ ಸರ್ವೇ ಪ್ರಕಾರ ದೇಶದಲ್ಲಿ ಬಿಜೆಪಿ ಮೈತ್ರಿಕೂಟ 400 ಗಡಿ ದಾಟಲಿದೆ. ಗದ್ದಿಗೌಡರ ಸರಳತೆಯೇ ಅವರನ್ನು ಮತ್ತೆ ಲೋಕಸಭೆಗೆ ಕಳಿಸಲಿದೆ

KannadaprabhaNewsNetwork | Published : Apr 26, 2024 7:47 PM IST

ನರಗುಂದ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ರಹಿತ ಆಡಳಿತಕ್ಕೆ ಮತದಾರರು ಹಿಡಿಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರೇ ಅಭಿವೃದ್ಧಿ ಕುಂಠಿತಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಪರ ನರಗುಂದ, ಹೊಳೆಆಲೂರ ಮತ್ತು ಲಕ್ಕುಂಡಿ ಮಂಡಲಗಳಲ್ಲಿ ಈಗಾಗಲೇ ಒಂದು ಸುತ್ತಿನ ಚುನಾವಣಾ ಪ್ರಚಾರ ಪೂರ್ಣಗೊಳಿಸಲಾಗಿದೆ. ಚುನಾವಣಾ ಆಯೋಗದ ಅನುಮತಿಯೊಂದಿಗೆ ಪಟ್ಟಣದೆಲ್ಲೆಡೆ ಬಹಿರಂಗ ಸಭೆ ನಡೆಸಲಾಗುತ್ತಿದೆ. ಪ್ರಧಾನಿ ಮೋದಿ ಅವರ ದಕ್ಷ, ಅಭಿವೃದ್ಧಿ ಪರ ಆಡಳಿತಕ್ಕೆ ದೇಶದೆಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹಿಂದೆ ಬಿಜೆಪಿ ಆಡಳಿತವಿದ್ದಾಗ ಕೈಗೊಂಡ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಜನರು ಇನ್ನೂ ಮರೆತಿಲ್ಲ. ಸಂಸದ ಪಿ.ಸಿ.ಗದ್ದಿಗೌಡ್ರ ಜಯ ನಿಶ್ಚಿತ. ನರಗುಂದ ಮತಕ್ಷೇತ್ರದ ಕಾಂಗ್ರೆಸ್ಸಿನಲ್ಲಿ ಎರಡ್ಮೂರು ಗುಂಪುಗಳಿವೆ. ಪರಸ್ಪರರಲ್ಲಿ ಹೊಂದಾಣಿಕೆ ಇಲ್ಲ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ 25 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ. ಇತ್ತೀಚಿನ ಸರ್ವೇ ಪ್ರಕಾರ ದೇಶದಲ್ಲಿ ಬಿಜೆಪಿ ಮೈತ್ರಿಕೂಟ 400 ಗಡಿ ದಾಟಲಿದೆ. ಗದ್ದಿಗೌಡರ ಸರಳತೆಯೇ ಅವರನ್ನು ಮತ್ತೆ ಲೋಕಸಭೆಗೆ ಕಳಿಸಲಿದೆ ಎಂದರು.

ಲೋಕಸಭಾ ಚುನಾವಣಾ ನಂತರ ರಾಜ್ಯ ಕಾಂಗ್ರೆಸ್‌ ಸರ್ಕಾರ ಇಬ್ಭಾಗವಾಗಿ ಪತನಗೊಳ್ಳಲಿದೆ. ಮಧ್ಯಂತರ ಚುನಾವಣೆ ಬಂದರೂ ಆಶ್ಚರ್ಯವಿಲ್ಲ. ಲೋಕಸಭಾ ಚುನಾವಣಾ ವೈಫಲ್ಯ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಸಂಗ ಬರಬಹುದು. ಹೀಗಾಗಿ ರಾಜ್ಯದಲ್ಲಿ ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸ್ಥಳೀಯ ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಸರ್ಕಾರದ ಗ್ಯಾರಂಟಿ ಕಮೀಟಿಗೆ ತಮ್ಮ ಮಗನನ್ನು ಆಯ್ಕೆ ಮಾಡಿ ನೇಮಕ ಮಾಡಿದ್ದಾರೆ. ಇದರಿಂದ ಸ್ಥಳೀಯ ಕಾಂಗ್ರೆಸ್‌ ಪಕ್ಷದಲ್ಲಿ ಯಾವಗಲ್ಲರು ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ ಎಂದರು.

ಬಿಜೆಪಿ ಮುಖಂಡರಾದ ಬಿ.ಬಿ. ಐನಾಪೂರ, ಅಜ್ಜಪ್ಪ ಹುಡೇದ, ನಾಗರಾಜ ನೆಗಳೂರ, ಮಂಜುನಾಥ ಮೆಣಸಗಿ, ಸಂತೋಷ ಹಂಚಿನಾಳ, ವಿಠ್ಠಲ ಹವಾಲ್ದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this article