ಮತಗಟ್ಟೆ ಸಂಖ್ಯೆ 83ರಲ್ಲಿ ಆರಂಭದಲ್ಲಿಯೇ ಮತಯಂತ್ರ ಕೈಕೊಟ್ಟಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ತಡ
ಲಕ್ಷ್ಮೇಶ್ವರ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮತದಾನವು ಸಂಜೆ 5 ಗಂಟೆಯ ವೇಳೆಗೆ ಶೇ. 60 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನಡೆದ ಬಗ್ಗೆ ತಹಸೀಲ್ದಾರ್ ವಾಸುದೇವ ಸ್ವಾಮಿ ತಿಳಿಸಿದ್ದಾರೆ.
ಪಟ್ಟಣದ 99, 107, 110 ಹಾಗೂ 112 ಮತಗಟ್ಟೆ ಸಂಖ್ಯೆಯಲ್ಲಿ ಮತಯಂತ್ರಗಳು ಕೈಕೊಟ್ಟ ಹಿನ್ನೆಲೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿದ್ದು ಕಂಡು ಬಂದಿತು. ಗೊಜನೂರ ಗ್ರಾಮದ ಮತಗಟ್ಟೆ ಸಂಖ್ಯೆ 83ರಲ್ಲಿ ಆರಂಭದಲ್ಲಿಯೇ ಮತಯಂತ್ರ ಕೈಕೊಟ್ಟಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ತಡವಾಗಿ ಮತದಾನ ಆರಂಭಗೊಂಡಿದೆ. ಇದರಿಂದ ಮತದಾರರು ಒಂದು ಗಂಟೆಯವರೆಗೆ ಕಾಯ್ದು ಮತದಾನ ಮಾಡಿದ್ದಾರೆ.
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನವು 11 ಗಂಟೆಯವರೆಗೆ ತುರುಸಿನಿಂದ ಕೂಡಿದ್ದರೆ, ಮಧ್ಯಾಹ್ನದ ಹೊತ್ತಿಗೆ ಬಿಸಿಲು ಆರಂಭವಾಗುತ್ತಿದಂತೆ ಮತಗಟ್ಟೆಗಳಲ್ಲಿ ಜನರು ವಿರಳವಾಗಿ ಕಂಡು ಬಂದರು. ಸಂಜೆ 4 ಗಂಟೆಗೆ ವೇಳೆಗೆ ಮತ್ತೆ ಮತದಾರರು ಬಂದು ಸರತಿ ನಿಂತು ಮತ ಚಲಾಯಿಸಿದ ದೃಶ್ಯ ಕಂಡು ಬಂದಿತು.
ವಯೋ ವೃದ್ಧರು ಹಾಗೂ ಅಂಗವಿಕಲರು ನಾವು ಯಾರಿಗೂ ಕಡಿಮೆಯಿಲ್ಲ ಎಂದು ಮತದಾನದ ಹಬ್ಬದಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.
ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಮತದಾನ ಶಾಂತಿಯುತವಾಗಿ ನಡೆಯಿತು ಎಂದು ಪಿಎಸ್ಐ ಈರಣ್ಣ ರಿತ್ತಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.