ಬಿಡಿಎ ಕಾಂಪ್ಲೆಕ್ಸ್‌ ಲೀಸ್‌ಗೆ ನೀಡಲು 200 ಕೋಟಿ ಕಿಕ್‌ಬ್ಯಾಕ್‌: ಅಶೋಕ್‌

KannadaprabhaNewsNetwork |  
Published : May 08, 2024, 01:01 AM IST
ಆರ್‌.ಅಶೋಕ್‌ | Kannada Prabha

ಸಾರಾಂಶ

ಟೆಂಡರ್‌ ರದ್ದು ಮಾಡದಿದ್ದರೆ ಉಗ್ರ ಹೋರಾಟ ಮಾಡುವೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರ ನಗರದ ಸುಮಾರು ಮೂರು ಸಾವಿರ ಕೋಟಿ ರುಪಾಯಿ ಮೌಲ್ಯದ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಲೀಸ್‍ಗೆ ಕೊಡುವ ಮೂಲಕ ಪರೋಕ್ಷ ಮಾರಾಟಕ್ಕೆ ಮುಂದಾಗಿದೆ. ಇದರ ಹಿಂದೆ 200 ಕೋಟಿ ರು.ಗೂ ಮೇಲ್ಪಟ್ಟು ಕಿಕ್ ಬ್ಯಾಕ್ ಇದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆಪಾದನೆ ಮಾಡಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಚ್‍ಎಸ್‍ಆರ್ ಲೇಔಟ್, ಆಸ್ಟಿನ್ ಟೌನ್, ಕೋರಮಂಗಲ, ವಿಜಯನಗರ, ಆರ್.ಟಿ.ನಗರ, ಸದಾಶಿವನಗರದ ಬಿಡಿಎ ಸ್ವತ್ತುಗಳನ್ನು ನುಂಗಣ್ಣಗಳು ನುಂಗಲು ಹೊರಟಿದ್ದಾರೆ. 2013-18ರಲ್ಲಿ ಇದೇ ಮಾದರಿಯ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಇದರ ವಿರುದ್ಧ ಬೆಂಗಳೂರಿನ ಜನರು ಪ್ರತಿಭಟನೆ ಮಾಡಿದ ಬಳಿಕ ನಿಂತು ಹೋಗಿತ್ತು ಎಂದರು.

ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಬೇರೆ ಮಾರ್ಗ ನೋಡಲಿ. ಕೂಡಲೇ ಈ ಟೆಂಡರ್‌ ರದ್ದುಪಡಿಸಲಿ. ಇಲ್ಲವಾದರೆ ವಿಧಾನಸಭೆ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಈ ಕಡತ ಬಂದಿತ್ತು. ಇದು ಲೂಟಿ ಮಾಡುವ ಸ್ಕೀಮ್‌ ಎಂದಿದ್ದಕ್ಕೆ ಯಡಿಯೂರಪ್ಪ ಅದನ್ನು ವಾಪಸ್‌ ಕಳುಹಿಸಿದ್ದರು. ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಈ ಲೂಟಿ ಮಾಫಿಯಾ ಮತ್ತೆ ಮುಂದೆ ಬಂದಿತ್ತು. ಆಗಲೂ ಮನವಿ ವಜಾ ಮಾಡಲಾಗಿತ್ತು. ಈಗ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಗೆ ಕಪ್ಪ ನೀಡಲು ಆಸ್ತಿ ಲೂಟಿ ಮಾಡಲು ಹೊರಟಿದ್ದಾರೆ. ಬೆಂಗಳೂರಿನ ಜನರು ಕೂಡ ಇದರ ವಿರುದ್ಧ ನಿಲ್ಲಬೇಕು ಎಂದು ಕೋರಿದರು.

ಇದೇನು ಕಾಂಗ್ರೆಸ್ಸಿಗರ ಅಪ್ಪನ ಆಸ್ತಿ ಅಲ್ಲ. ಬಿಡಿಎ ಹಿಂದಿನ ಅಧ್ಯಕ್ಷರು ಆಸ್ತಿಗಳನ್ನು ಉಳಿಸಿ ಬೆಳೆಸಿದ್ದಾರೆ. ‘ದಿನವೂ ಕೋಳಿ ಮೊಟ್ಟೆ ತಿನ್ನೋದ್ಯಾಕೆ? ಅದರ ಬದಲು ಕೋಳಿಯನ್ನೇ ತಿಂದರೆ ಹೇಗೆ’ ಎಂದು ಇವರು ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಕಾಂಗ್ರೆಸ್ ನುಂಗಣ್ಣಗಳ ಪಾಲಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅಶೋಕ್‌ ಎಚ್ಚರಿಕೆ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ