ಸ್ವೀಪ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ ಕನ್ನಡಪ್ರಭ ವಾರ್ತೆ ಕೊಪ್ಪಳ
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ವಿಕಲಚೇತನರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆವರಣದಿಂದ ಕೇಂದ್ರೀಯ ಬಸ್ ನಿಲ್ದಾಣದ ವರೆಗೆ ಹಮ್ಮಿಕೊಂಡ ಈ ಸ್ವೀಪ್ ಜಾಗೃತಿ ವಿಶೇಷ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಚಾಲನೆ ನೀಡಿ, ವಿಶೇಷಚೇತನರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಜ್ಞಾ ವಿಧಿ ಸ್ವೀಕಾರ:ಕಾರ್ಯಕ್ರಮದ ಅಂಗವಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ರತ್ನಂ ಪಾಂಡೆಯವರು ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ವೇಳೆ ನೆರೆದಿದ್ದ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸರಸಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶ್ರೀದೇವಿ ಎಸ್.ಎನ್., ಕೊಪ್ಪಳ ತಾಪಂ ಇಒ ದುಂಡಪ್ಪ ತುರಾದಿ, ಸ್ವೀಪ್ ಜಿಲ್ಲಾ ಐಕಾನ್‌ಗಳಾದ ಶಿವಕುಮಾರ ಮಾಲಿಪಾಟೀಲ್, ಮಹೆಬೂಬ್ ಕಿಲ್ಲೆದಾರ, ಜಿಲ್ಲಾ ಐಇಸಿ ಸಂಯೋಜಕರಾದ ಶ್ರೀನಿವಾಸ ಚಿತ್ರಗಾರ, ಸೇರಿದಂತೆ ಇತರರು ಹಾಜರಿದ್ದರು.
ಈ ಅಭಿಯಾನದಲ್ಲಿ 100ಕ್ಕಿಂತ ಅಧಿಕ ಅಂಗವಿಕಲರು ತಮ್ಮ ತ್ರಿಚಕ್ರ ವಾಹನದೊಂದಿಗೆ ಭಾಗವಹಿಸಿ ಜಿಲ್ಲಾಡಳಿತ ಭವನದಿಂದ ಹೊರಟು ಬಸವೇಶ್ವರ (ಗಂಜ್) ಸರ್ಕಲ್, ಅಶೋಕ್ ವೃತ್ತ ಮಾರ್ಗವಾಗಿ ಕೇಂದ್ರ ಬಸ್ ನಿಲ್ದಾಣದ ವರೆಗೆ ಸಂಚರಿಸಿ, ಜಾಗೃತಿ ಫಲಕಗಳನ್ನು ಹಿಡಿದು ಮತದಾರರಿಗೆ ಮತದಾನದ ಅರಿವು ಮೂಡಿಸಿದ್ದು ವಿಶೇಷವಾಗಿತ್ತು.