ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಆಪ್ತನ ಮೇಲೆ ಐಟಿ ದಾಳಿ

KannadaprabhaNewsNetwork |  
Published : Apr 25, 2024, 01:03 AM IST

ಸಾರಾಂಶ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಆಪ್ತ ಹಾಗೂ ಬಿಬಿಎಂಪಿ ಮಾಜಿ ಸದಸ್ಯರೊಬ್ಬರ ಮನೆ ಮೇಲೆ ದಾಳಿ ನಡೆಸಿ ನಗ-ನಾಣ್ಯ ವಶಪಡಿಸಿಕೊಂಡಿದ್ದಾರೆ.

87 ಲಕ್ಷ ರು. ನಗದು, ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ ದಾಖಲೆ ವಶಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕೆಲವೇ ತಾಸುಗಳು ಬಾಕಿ ಇರುವ ಹೊತ್ತಿನಲ್ಲಿಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಆಪ್ತ ಹಾಗೂ ಬಿಬಿಎಂಪಿ ಮಾಜಿ ಸದಸ್ಯರೊಬ್ಬರ ಮನೆ ಮೇಲೆ ದಾಳಿ ನಡೆಸಿ ನಗ-ನಾಣ್ಯ ವಶಪಡಿಸಿಕೊಂಡಿದ್ದಾರೆ. ಬಿಬಿಎಂಪಿ ಮಾಜಿ ಸದಸ್ಯ ಗಂಗಾಧರ್‌ ಅವರ ಕೋಣನಕುಂಟೆ ಕ್ರಾಸ್‌ ಬಳಿ ಇರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ 87 ಲಕ್ಷ ರು. ನಗದು ಸೇರಿದಂತೆ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಮತ್ತು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಗಂಗಾಧರ್‌ ನಿವಾಸದಲ್ಲಿ ಸತತ 12 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಹಣ ಹಂಚಿಕೆ ಮಾಡಲು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೂರು ಕಾರುಗಳಲ್ಲಿ ಒಟ್ಟು 11 ಅಧಿಕಾರಿಗಳು ಮನೆಗೆ ಆಗಮಿಸಿ ತಪಾಸಣೆ ಕೈಗೊಂಡರು ಎನ್ನಲಾಗಿದೆ. ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿರುವ ಐಟಿ ಅಧಿಕಾರಿಗಳು ವಿಚಾರಣೆ ಹಾಜರಾಗುವಂತೆ ನೊಟೀಸ್‌ ಜಾರಿ ಮಾಡಲಾಗಿದೆ. ವಿಚಾರಣೆ ವೇಳೆ ಪತ್ತೆಯಾದ ವಸ್ತುಗಳು ಮೌಲ್ಯವು ಮತ್ತು ಹೇಳಿಕೆಯಲ್ಲಿ ನೀಡಲಾಗುವ ಮೌಲ್ಯವು ಹೊಂದಾಣಿಕೆಯಾಗಲಿದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಶೋಧ ಕಾರ್ಯ ಮುಗಿಸಿದ ಬಳಿಕ ಮಾತನಾಡಿದ ಗಂಗಾಧರ್‌, ಕಾರ್ಯಾಚರಣೆ ವೇಳೆ ಬಂದಿದ್ದ ಬಹುತೇಕ ಅಧಿಕಾರಿಗಳು ಉತ್ತರ ಭಾರತದವರಾಗಿದ್ದರು. ಅವರ ಭಾಷೆ ನಮಗೆ ಅರ್ಥವಾಗುತ್ತಿರಲಿಲ್ಲ. ಮನೆಗೆ ಬಂದ ತಕ್ಷಣ ದೌರ್ಜನ್ಯ ಮಾಡುವ ರೀತಿಯಲ್ಲಿ ಮಾತನಾಡಿದರು. ಅವರು ಬಳಸಿದ ಭಾಷೆಯು ಕಾಂಗ್ರೆಸ್‌ ಪಕ್ಷಕ್ಕೆ ಕೆಲಸ ಮಾಡಬಾರದು ಎನ್ನುವ ರೀತಿಯಲ್ಲಿತ್ತು. ನನ್ನ ಬಳಿ ಚುನಾವಣಾ ಹಣ ಇರಲಿಲ್ಲ. ಇತ್ತೀಚೆಗೆ ಜಮೀನು ಮಾರಿದ್ದು, ಅದರ ಹಣ ಮನೆಯಲ್ಲಿತ್ತು. ಈ ವಿಚಾರವಾಗಿ ನಮ್ಮ ಅಕೌಂಟೆಂಟ್‌ ಉತ್ತರ ನೀಡಲಿದ್ದಾರೆ. ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಲಸ ಮಾಡಬಾರದು ಎನ್ನುವ ರೀತಿಯಲ್ಲಿತ್ತು ಎಂದರು. ಈ ನಡುವೆ, ದಾಳಿಯನ್ನು ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ