ಕನ್ನಡಪ್ರಭ ವಾರ್ತೆ ಮಂಗಳೂರು
ಜಿಲ್ಲೆಯ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುತ್ತಿದ್ದೇವೆಯೇ ಹೊರತು ದ್ವೇಷ ಹಂಚುವ ಕೆಲಸ ಮಾಡಿಲ್ಲ. ಆದರೆ ಬಿಜೆಪಿಯವರು ಸೋಲುವ ಭೀತಿಯಿಂದ ಅಭಿವೃದ್ಧಿ ವಿಚಾರವನ್ನೇ ಎತ್ತದೆ ದ್ವೇಷ, ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಚುನಾವಣೆ ಪ್ರೀತಿ ಹಂಚುವ ಚುನಾವಣೆ ಆಗಲಿ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ಬಹಳಷ್ಟು ರೀತಿಯಲ್ಲಿ ಸಾಕಾರ ಆಗಬೇಕಿದೆ ಎಂದರು.ಜಿಲ್ಲೆಗೆ ಬಿಜೆಪಿ ಕೊಡುಗೆ ಶೂನ್ಯ:
ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಶೂನ್ಯ. ಸ್ವಾತಂತ್ರ್ಯಾನಂತರ ಆರಂಭಿಕ 40 ವರ್ಷಗಳಲ್ಲಿ ಜಿಲ್ಲೆಗೆ ಏರ್‌ಪೋರ್ಟ್, ಬಂದರು, ಜಿಲ್ಲಾದ್ಯಂತ ರಸ್ತೆಗಳು, ಸೇತುವೆಗಳು, ಶಿಕ್ಷಣ ಸಂಸ್ಥೆಗಳು, ಎಂಸಿಎಫ್, ಎಂಆರ್‌ಪಿಎಲ್, ಒಎನ್‌ಜಿಸಿ, ಎನ್‌ಐಟಿಕೆಯಂಥ ಸಾಲು ಸಾಲು ಯೋಜನೆಗಳನ್ನು ತಂದದ್ದು ಕಾಂಗ್ರೆಸ್ ಸಂಸದರು. ಈ ಕಾರಣದಿಂದಲೇ ಜಿಲ್ಲೆ ಈ ಮಟ್ಟದಲ್ಲಿ ಬೆಳೆದು ನಿಲ್ಲಲು ಸಾಧ್ಯವಾಗಿದೆ. ಆದರೆ ಬಿಜೆಪಿ ಅಧಿಕಾರದಲ್ಲಿದ್ದ ಕಳೆದ 33 ವರ್ಷಗಳಲ್ಲಿ ಇಂಥ ಯಾವ ಯೋಜನೆ ತಂದಿದ್ದಾರೆ ಹೇಳಲಿ. ಅವರೆಂದೂ ಅಭಿವೃದ್ಧಿ ವಿಚಾರಗಳನ್ನು ಮಾತನಾಡಲ್ಲ. ಬದಲಾಗಿ ಹಿಂದುತ್ವ, ಮೋದಿ ಹೆಸರು ಹೇಳುತ್ತಿದ್ದಾರೆ ಎಂದು ಪದ್ಮರಾಜ್ ಆರೋಪಿಸಿದರು.ಬಿಜೆಪಿಯವರು ತಾವು ಮಾತ್ರ ರಾಷ್ಟ್ರ ಭಕ್ತರು, ನಾವು ದೇಶದ್ರೋಹಿಗಳು ಎನ್ನುತ್ತಾರೆ. ಇದು ದ್ವೇಷ ಅಲ್ವಾ? ನಾನೂ ಹಿಂದೂ ಅಲ್ವಾ? ಕಡು ಬಡತನದಲ್ಲಿ ಹುಟ್ಟಿ ವಕೀಲನಾಗಿ, 27 ವರ್ಷ ಕಾಲ ಕುದ್ರೋಳಿ ದೇವಾಲಯದ ಟ್ರಸ್ಟಿಯಾಗಿ, ಕೋಶಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಹಿಂದೂ ಧರ್ಮ ಕಲಿಸಿಕೊಟ್ಟ ಪಾಠ ಇದು. ಈ ಕಾರ್ಯಗಳು ದೇಶ ಭಕ್ತಿಯ ಕಾರ್ಯಗಳು ಅಲ್ವಾ? ಬಿಜೆಪಿಯವರು ಯುವಕರನ್ನು ಜಾತಿ ಧರ್ಮದ ಹೆಸರಿನಲ್ಲಿ ಪ್ರೇರೇರಿಸಿ ಜೈಲು ಸೇರುವಂತೆ ಮಾಡುವುದು, ಕೊಲೆಗೀಡಾಗಿ ಅವರ ಮನೆಗಳನ್ನು ಅನಾಥ ಮಾಡುವುದು ದೇಶ ಪ್ರೇಮವಾ ಎಂದು ಪ್ರಶ್ನಿಸಿದರು.
ಈ ಎಲ್ಲ ವಿಚಾರಗಳನ್ನು ಜನರ ಮುಂದೆ ಇರಿಸುತ್ತಿದ್ದೇವೆ. ಜತೆಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಶಕ್ತಿ ಬಂದಿದೆ. ಕಾರ್ಯಕರ್ತರು, ನಾಯಕರು ಅತ್ಯಂತ ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವೆಲ್ಲವೂ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ ಎಂದು ಪದ್ಮರಾಜ್ ಹೇಳಿದರು.ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.