- ಮತ ಬಹಿಷ್ಕಾರ ಬೆದರಿಕೆ । ಹಳ್ಳಿಹಾಳ್‌ಮಟ್ಟಿ ಕ್ಯಾಂಪ್‌ಗೆ ದೌಡಾಯಿಸಿದ ತಹಸೀಲ್ದಾರ್
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಗೆ ಸಮೀಪದ ಕೊಕ್ಕನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಹಾಳ್ ಮಟ್ಟಿ ಕ್ಯಾಂಪ್ ಜನತೆ ರಸ್ತೆ ದುರಸ್ತಿಗೊಳಿಸಬೇಕು, ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವ ಬೆದರಿಕೆಯೊಡ್ಡಿ, ಈ ಹಿನ್ನೆಲೆ ಚುನಾವಣಾ ಅಧಿಕಾರಿಗಳ ತಂಡ ತಹಸೀಲ್ದಾರ್ ಗುರುಬಸವರಾಜ್ ನೇತೃತ್ವದ ತಂಡ ಗ್ರಾಮಕ್ಕೆ ಆಗಮಿಸಿ, ಸ್ಥಳೀಯರ ಮನವೊಲಿಸುವಲ್ಲಿ ಯಶಸ್ವಿಯಾದರು.ಅಧಿಕಾರಿಗಳು ಗ್ರಾಮಕ್ಕೆ ಬರುವ ಮಾರ್ಗದಲ್ಲಿ ಗ್ರಾಮಸ್ಥರು ರಸ್ತೆಯಲ್ಲೇ ಕುಳಿತು ಜೀಪ್‌ಗೆ ಮುತ್ತಿಗೆ ಹಾಕಿ ರಸ್ತೆ ಸಮಸ್ಯೆ ಹೇಳಿಕೊಂಡರು.
ಜನಪ್ರತಿನಿಧಿಗಳು ರಸ್ತೆ ನಿರ್ಮಾಣಕ್ಕೆ ಚರ್ಚ್‌ನಲ್ಲಿ, ದೇವಾಲಯದಲ್ಲಿ ಗಂಟೆ ಬಾರಿಸಿ ಭರವಸೆ ನೀಡಿದ್ದರು. ಕಳೆದ ಐದು ವರ್ಷದ ಹಿಂದೆ ಕಾಟಾಚಾರದ ಮಣ್ಣು ಹಾಕಿ ಗುತ್ತಿಗೆದಾರರು ಕೈ ತೊಳೆದುಕೊಂಡರು. ರಸ್ತೆಯ ಗುಂಡಿಯಲ್ಲಿ ಬಿದ್ದು ಒಬ್ಬರು ಮರಣ ಹೊಂದಿದ್ದಾರೆ. ಅಧಿಕಾರಿಗಳ ಮೇಲೆ ಈಗಲೂ ನಂಬಿಕೆ ಇದೆ, ನಮ್ಮ ಹಕ್ಕು ಕೇಳಿದ್ದೇವೆ, ನಮಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದರು.
ಪಂಚಾಯತ್‌ರಾಜ್ ಎಂಜಿನಿಯರ್ ಗಿರೀಶ್ ಮಾತನಾಡಿ ತಾಲೂಕಲ್ಲಿ ೬೦೬ ಕಿಮೀ ರಸ್ತೆಯಿದ್ದು, ೩೬೮ ಕಿಮೀ ಗ್ರಾಮೀಣ ರಸ್ತೆ, ೩೨೦ ಕಿಮೀ ಕಚ್ಚಾ ರಸ್ತೆಯಿದೆ. ಸರ್ವಋತು ರಸ್ತೆಗೆ ಒಟ್ಟು ೧೩ ಕಿಮೀ ರಸ್ತೆಯ ಕಾಮಗಾರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಗ್ರಾಮಸ್ಥರಾದ ಶ್ರೀನಿವಾಸ್, ಬಸವನಗೌಡ, ವೆಂಕಟೇಶ್, ಮಹದೇವಪ್ಪ, ಜ್ಯೋತಿ, ಸುಮಾ, ಶಾರದಮ್ಮ, ಶೇಷಮ್ಮ, ದೇವಿಕಾ, ಜಯಮ್ಮ, ನಾಗಮ್ಮ, ರತ್ನಮ್ಮ, ದಿಳ್ಯಪ್ಪ, ಸತ್ಯವತಿ, ಹುಲಿಗೆಪ್ಪ ಮತ್ತಿತರರು ಅಧಿಕಾರಿಗಳ ಮಾತಿಗೆ ಒಪ್ಪಿಕೊಂಡು ಮತದಾನದ ಸಂಕಲ್ಪ ಮಾಡಿದರು. ಅಧಿಕಾರಿಗಳಾದ ರಾಮಕೃಷ್ಣಪ್ಪ, ಉಪ ತಹಸೀಲ್ದಾರ್ ರವಿ, ಪಿಡಿಒ ಉಮೇಶ್, ರಾಜಸ್ವ ನಿರೀಕ್ಷಕ ಆನಂದ್ ಇದ್ದರು.
ಹಳ್ಳಿಹಾಳ್‌ಮಟ್ಟಿ ಕ್ಯಾಂಪ್‌ನಲ್ಲಿ ಮತದಾರರನ್ನು ಮನವೊಲಿಸುವ ಅಧಿಕಾರಿಗಳು.
ತಹಸೀಲ್ದಾರ್ ವಾಹನಕ್ಕೆ ಮುತ್ತಿಗೆ ಹಾಕಿ ಸಮಸ್ಯೆ ಹೇಳಿಕೊಂಡರು.