ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾಡಳಿತ, ಜಿ.ಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಂಗಳವಾರ ಜಿಲ್ಲಾಡಳಿತ ಕಚೇರಿ ಆವರಣದಿಂದ ಅಲ್ಲಮಪ್ರಭು ಮೈದಾನ ( ಫ್ರೀಡಂ ಪಾರ್ಕ್) ದವರೆಗೆ ಮತದಾನ ಕುರಿತು ಜಾಗೃತಿ ಮೂಡಿಸುವ ಬೈಕ್ ರ್ಯಾಲಿಯನ್ನು ನಡೆಸಲಾಯಿತು.ಲೋಕಸಭಾ ಚುನಾವಣೆ ಪ್ರಯುಕ್ತ ಸಾರ್ವಜನಿಕರಲ್ಲಿ ಮತದಾನದ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ವತಿಯಿಂದ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಜಿ.ಪಂ.ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಚಾಲನೆ ನೀಡಿ, ತಾವೂ ಬೈಕ್ ಚಲಾಯಿಸಿಕೊಂಡು ಅಲ್ಲಮಪ್ರಭು ಮೈದಾನ ತಲುಪಿದರು.
ರ್ಯಾಲಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಮತದಾನದ ಜಾಗೃತಿ ಕುರಿತು ಘೋಷಣೆಗಳುಳ್ಳ ಪ್ಲೆಕಾರ್ಡ್ ಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗಿದರು. ರ್ಯಾಲಿಯು ಡಿಸಿ ಕಚೇರಿಯಿಂದ ಹೊರಟು ಗೋಪಿ ಸರ್ಕಲ್ ಮುಖಾಂತರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ತಲುಪಿ ನಂತರ ಸಕ್ರ್ಯೂಟ್ ಹೌಸ್, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ಸಿಗ್ನಲ್ ಮೂಲಕ ಅಲ್ಲಮ ಪ್ರಭು ಮೈದಾನ ತಲುಪಿತು. "ನೋಡಿ ನಾವು ಶಿವಮೊಗ್ಗ ಜನ, ಮಾಡೇ ಮಾಡ್ತಿವಿ ಮತದಾನ " "ಜೋಗ ನೋಡೋದು ವೈಭೋಗ, ಮತದಾನ ಮಾಡೋದು ಸುಯೋಗ " ಎಂಬಿತ್ಯಾದಿ ಘೋಷಣೆಗಳು ರ್ಯಾಲಿಯಲ್ಲೊ ಮೊಳಗಿದವು. ಜಿಲ್ಲಾಡಳಿತ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿಯಿಂದ ಇರಿಸಲಾಗಿರುವ ಸೆಲ್ಫಿ ಕಾರ್ನರ್‌ನಲ್ಲಿ ಮಹಿಳೆಯರು, ರ್ಯಾಲಿಯಲ್ಲಿ ಪಾಲ್ಗೊಂಡವರು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡರು.ಈ ವೇಳೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಜಿ.ಪಂ ಯೋಜನಾ ನಿರ್ದೇಶಕ ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಸ್ವೀಪ್ ನೋಡಲ್ ಆಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.ಹೊಸನಗರದಲ್ಲಿ ಬೈಕ್ ರ್ಯಾಲಿ: ಜಿಲ್ಲಾ ಪಂಚಾಯಿತಿ, ತಾ.ಪಂ ಹೊಸನಗರ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಇಂದು ಹೊಸನಗರದಲ್ಲಿ ಮತದಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ನಡೆಸಲಾಯಿತು.ಈ ವೇಳೆ ತಾ.ಪಂ ಇಒ ನರೇಂದ್ರ ಕುಮಾರ್, ತಹಶೀಲ್ದಾರ್ ರಶ್ಮಿ, ಪ.ಪಂ ಮುಖ್ಯಾಧಿಕಾರಿ ಮಾರುತಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಶಿವಪ್ರಸಾದ್, ಕೊಡಚಾದ್ರಿ ಕಾಲೇಜಿನ ಉಪನ್ಯಾಸಕ ಪ್ರಭಾಕರ್, ಬಿಇಒ ಕೃಷ್ಣಮೂರ್ತಿ, ಕೃಷಿ ಸಹಾಯಕ ನಿರ್ದೇಶಕ ಸಚಿನ್, ತೋಟಗಾರಿಕೆ ಸಹಾಯಕ ನಿರ್ದೇಶಕ ಕರಿಬಸಪ್ಪ ಇತರೆ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.
ಇನ್ನು, ಹೊಸನಗರ ತಾಲೂಕು ಮುಂಬಾರು ಗ್ರಾಮ ಪಂಚಾಯತಿ ವತಿಯಿಂದ ಮುಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಬೈಕ್ ರ್ಯಾಲಿ ನಡೆಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು.ಸಾಗರದಲ್ಲಿ ಮತ ಜಾಗೃತಿ: ಸಾಗರದಲ್ಲಿ ಮಂಗಳವಾರ ಲೋಕಸಭಾ ಚುನಾವಣೆಯ ನಿಮಿತ್ತ ಸಾಗರದ ಆಡಳಿತವು ಸಾಗರದ ಕಾರ್ಯನಿರ್ವಣ ಅಧಿಕಾರಿಗಳ ಕಚೇರಿಯಿಂದ ಸಾಗರದ ಪ್ರಮುಖ ಬೀದಿಗಳಲ್ಲಿ ಮತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಾರ್ವಜನಿಕರು ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ಮಾಡುವಂತೆ ಬೈಕ್ ಮೆರವಣಿಗೆಯ ಮುಖಾಂತರ ಜಾಗೃತಿ ಮೂಡಿಸಿದರು.
ಶಿಕಾರಿಪುರದಲ್ಲಿ ಬೈಕ್ ರ್ಯಾಲಿ: ಶಿಕಾರಿಪುರ ಪಟ್ಟಣದಲ್ಲಿ ಮಂಗಳವಾರ ಲೋಕಸಭಾ ಚುನಾವಣೆಯ ಪ್ರಯುಕ್ತ ತಾಲೂಕು ಆಡಳಿತ, ತಾಪಂ, ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ಪ್ರತಿಯೊಬ್ಬ ಮತದಾರರು ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನವನ್ನು ಮಾಡಬೇಕು ಮತದಾನ ನಿಮ್ಮ ಹಕ್ಕು ಎಲ್ಲರೂ ಪಾಲ್ಗೊಳ್ಳಿ ಎಂದು ಘೋಷಣೆಗಳ ಮೂಲಕ ಅರಿವು ಮೂಡಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮತ್ತು ಪುರಸಭೆಯ ಮುಖ್ಯ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದರು. ಪುರಸಭೆ, ತಾಲೂಕು ಪಂಚಾಯತಿ, ತಾಲೂಕು ಆಡಳಿತ, ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು.ಹೊಸಮನೆಯಲ್ಲಿ ಮತದಾನ ಜಾಗೃತಿಗಾಗಿ ಕ್ರೀಡಾಕೂಟ: ನಗರದ ಹೊಸಮನೆಯ ಬೂತ್ ಸಂಖ್ಯೆ 83 ರಲ್ಲಿ ಸೋಮವಾರ ಪುರಷ ಮತ್ತು ಮಹಿಳೆಯರಿಗೆ ಕ್ರೀಡಾಕೂಟ ನಡೆಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.ಕಳೆದ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದ್ದ ಹೊಸಮನೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಮಾಡುವಂತೆ ಅರಿವು ಮೂಡಿಸುವ ಉದ್ದೇಶದಿಂದ ಪುರುಷರು ಮತ್ತು ಮಹಿಳೆಯರಿಗೆ ‘ಬಕೇಟ್ ಇನ್ ದ ಬಾಲ್’ ಆಟ ಆಡಿಸುವ ಮೂಲಕ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಮೇ 7 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ತಮ್ಮ ಬೂತ್‍ಗಳಿಗೆ ಹೋಗಿ ತಪ್ಪದೆ ಮತದಾನ ಮಾಡಬೇಕು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ. 100 ರಷ್ಟು ಮತದಾನ ಮಾಡಬೇಕು ಎಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು . ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಅನುಪಮ, ಸುಪ್ರಿಯಾ, ರತ್ನಾಕರ್, ರೇಣು, ಗೀತಾ, ಅಧಿಕಾರಿ ಸಿಬ್ಬಂದಿ, ಬಿ.ಎಲ್.ಒ ಮತ್ತು ಮೇಲ್ವಿಚಾರಕರು ಉಪಸ್ಥಿತರಿದ್ದರು.ಚುನಾವಣಾ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಂಡಲ್ಲಿ ಕ್ರಮ: ಡಿಸಿ ಸೂಚನೆ ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಕಾರ್ಯ ಮತ್ತು ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಿರುವುದು ಕಂಡು ಬಂದಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದರು.ಭಾರತ ಸರ್ಕಾರ ಹಾಗೂ ವಿಶ್ವ ಸಂಸ್ಥೆಯು ಅನುಮೋದಿತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992ರ ಡಿಸೆಂಬರ್ 11 ರಂದು ಒಪ್ಪಿ ಅನುಮೋದಿಸಿದೆ. ಈ ಮಕ್ಕಳ ಹಕ್ಕುಗಳ ಒಡಂಬಡಿಕೆ ಹಾಗೂ ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ) 2015 ರನ್ವಯ 18 ವರ್ಷದೊಳಗಿನ ಎಲ್ಲ ಮಕ್ಕಳು ಎಂದು ಪರಿಗಣಿತವಾಗಿದೆ.
ಮಕ್ಕಳ ಹಕ್ಕುಗಳ ಒಡಂಬಡಿಕೆಯ ಕಲಂ 32 ಮತ್ತು 36 ರಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅಪಾಯಕಾರಿಯಾದ ಕ್ಷೇತ್ರಗಳಲ್ಲಿ ಮಕ್ಕಳು ಕಾರ್ಯ ನಿರ್ವಹಿಸದಂತೆ ಹಾಗೂ ಮಕ್ಕಳ ಬೆಳವಣಿಗೆಗೆ ತೊಡಕನ್ನುಂಟು ಮಾಡುವ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದೆ ಎಂದು ತಿಳಿಸಿದರು.ರಾಜಕೀಯ ಪಕ್ಷದ ಅಭ್ಯರ್ಥಿಗಳು/ಸ್ವತಂತ್ರ ಅಭ್ಯರ್ಥಿಗಳು/ಪಕ್ಷದ ಕಾರ್ಯಕರ್ತರುಗಳು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಾಗೂ ರಾಜಕೀಯ ಪಕ್ಷದ ಕುರಿತು ಮತ ನೀಡುವಂತೆ ಕೋರುವುದನ್ನು, ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳದಂತೆ ನಿಷೇಧಿಸಿದೆ ಎಂದು ಮಾಹಿತಿ ನೀಡಿದರು.