ಕನ್ನಡಪ್ರಭ ವಾರ್ತೆ ಮಲ್ಪೆ
ಅವರು ಮಲ್ಪೆಯ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಉಡುಪಿ ಇವರ ವತಿಯಿಂದ ಆಯೋಜಿಸಲಾದ ಜಲ ಕ್ರೀಡೆಯ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿರ್ಣಾಯಕ ಪಾತ್ರ ಮತದಾರರ ಮೇಲಿದೆ. ಮೌಲ್ಯಯುತವಾದ ಇಂತಹ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾರರು ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೇ ನಿರ್ಭೀತರಾಗಿ ಮತವನ್ನು ಚಲಾಯಿಸಬೇಕು ಎಂದರು.ಪ್ಯಾರಾಸೈಯ್ಲಿಂಗ್ ಮೂಲಕ ಕಡಲ ತೀರದಲ್ಲಿದ್ದ ಸಾವಿರಾರು ಪ್ರವಾಸಿಗರ ಗಮನ ಸೆಳೆಯಲು ಆಯೋಜಿಸಲಾಗಿದ್ದ ಈ ವಿಭಿನ್ನ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜೊತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಸ್ಪಿ ಡಾ. ಅರುಣ್ ಕೆ., ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಭಾಗವಹಿಸಿದ್ದರು.
ಫ್ಲೋಟಿಂಗ್ ಬ್ರಿಡ್ಜ್ ಮೇಲೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಮತದಾನ ಮಾಡುವ ಕುರಿತು ಜಾಗೃತಿ ಘೋಷಣೆಗಳನ್ನು ಮೊಳಗಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಬ್ರಹ್ಮಾವರ ಪಂಚಾಯಿತಿ ಸಿಬ್ಬಂದಿ ಗಣೇಶ್ ಹಾಗೂ ಶೇಖರ್ ರವರು ಮತದಾನ ಜಾಗೃತಿ ಯಕ್ಷಗಾನ ಪ್ರದರ್ಶಿಸಿದರು. ಬನ್ನಂಜೆಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಹಾಗೂ ವೃತ್ತಿಪರ ನೃತ್ಯಗಾರರು ಮತದಾನ ಜಾಗೃತಿ ಕುರಿತು ವಿವಿಧ ನೃತ್ಯ ಪ್ರದರ್ಶನಗಳನ್ನು ಪ್ರದರ್ಶಿಸಿದರು.