ಒಂದೇ ಕುಟುಂಬದ 21 ಜನ ಸದಸ್ಯರಿಂದ ಮತದಾನ

KannadaprabhaNewsNetwork |  
Published : May 08, 2024, 01:07 AM IST
ಶಹಾಪುರ ನಗರದ ಚೌದರಿ ಕುಟುಂಬದ 21 ಸದಸ್ಯರು ಏಕಕಾಲದಲ್ಲಿ ಮತ ಚಲಾಯಿಸಿದರು. | Kannada Prabha

ಸಾರಾಂಶ

ಶಹಾಪುರ ನಗರದ ಚೌದರಿ ಕುಟುಂಬದ 21 ಸದಸ್ಯರು ಏಕಕಾಲದಲ್ಲಿ ಮತ ಚಲಾಯಿಸಿದರು.

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ಲೋಕಸಭಾ ಚುನಾವಣೆ ಹಿನ್ನೆಲೆ ಶಹಾಪುರ ಮತಕ್ಷೇತ್ರದಲ್ಲಿ ಒಂದೇ ಕುಟುಂಬದ 21 ಜನ ಸದಸ್ಯರು ಮತ ಚಲಾಯಿಸಿ, ಗಮನ ಸೆಳೆದರು.

ನಗರದ ವಾರ್ಡ್ ನಂಬರ್-15 ರ ಚೌಧರಿ ಕುಟುಂಬದ 21 ಜನ ಸದಸ್ಯರು ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಪೇಟದ ಸಖಿ ಮತಗಟ್ಟೆ ಸಂಖ್ಯೆ 184ರಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ತಂದೆ, ತಾಯಿ, ಅಣ್ಣ ತಮ್ಮಂದಿರು ಅತ್ತೆ ಸೊಸೆಯರು ಹಾಗೂ ಮೊಮ್ಮಗಳು ಸೇರಿ ಒಂದೇ ಕುಟುಂಬದ 21 ಮಂದಿ ಮತ ಹಾಕುವ ಮೂಲಕ ಗಮನ ಸೆಳೆದರು.

ಯಾವುದೇ ಚುನಾವಣೆಯಾಗಲಿ ಈ ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರಿ, ಎಲ್ಲರೂ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ.

ಈ ಆಧುನಿಕತೆ ಭರಾಟೆಯಲ್ಲಿ ಇಂದಿನಿಂದಲೂ ನಡೆದುಕೊಂಡು ಬಂದ ಅವಿಭಕ್ತ ಕುಟುಂಬಗಳು ಇಂದು ನಾಶವಾಗಿ ಚಿಕ್ಕ ಚಿಕ್ಕ ಕುಟುಂಬಗಳಾಗಿ ಬೇರೆಯಾಗಿ ಜೀವಿಸುತ್ತಿವೆ. ಅಧುನಿಕ ಭರಾಟೆಯಲ್ಲೂ ನಮ್ಮ ಕುಟುಂಬ ಇಂದಿನ ಸಂಪ್ರದಾಯ ಮುಂದುವರಿಸಿಕೊಂಡು ನಮ್ಮ ಚೌಧರಿ, (ಕೊಲ್ಲೂರು) ಕುಟುಂಬವು ಐದಾರು ತಲೆಮಾರಿನಿಂದ ಅವಿಭಕ್ತ ಕುಟುಂಬ ಬೆಳೆದು ಬಂದಿದೆ. ಸದ್ಯ ನಮ್ಮ ಕುಟುಂಬದಲ್ಲಿ 40 ಜನ ಸದಸ್ಯರು ಒಟ್ಟಿಗೆ ಜೀವಿಸುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅನ್ಯೋನ್ಯಭಾವದಿಂದ ಬಾಳುತ್ತಿದ್ದೇವೆ ಅನ್ನುತ್ತಾರೆ.

ಸುಮಾರು ವರ್ಷಗಳಿಂದಲೂ ಯಾವುದೇ ಚುನಾವಣೆ ಬರಲಿ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ಹೋಗಿ ಮತ ಚಲಾಯಿಸುವುದು ಖುಷಿ ಕೊಡುತ್ತಿದೆ ಎಂದು ಕುಟುಂಬದ ಯಜಮಾನ ಮಲ್ಲಿಕಾರ್ಜುನ್ ಸಿ. ಕೊಲ್ಲೂರ ತಿಳಿಸಿದರು.

ಇಂದಿನ ಸಮಾಜದಲ್ಲಿ ಸಂಸಾರದಲ್ಲಿ ಬಿರುಕು ಕಂಡುಬರುವುದು ಕುಟುಂಬದಲ್ಲಿ ಹೊಂದಾಣಿಕೆ ಕೊರತೆಯಿಂದ. ನಮ್ಮ ಮನೆಯಲ್ಲಿ ಪುರುಷರು ಮಹಿಳೆಯರು ಪ್ರೀತಿ ವಿಶ್ವಾಸದಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೋಗುತ್ತೇವೆ. ಇದರಿಂದ ಸಂಸಾರದಲ್ಲಿ ಬಿರುಕು ಬಿಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಸದಸ್ಯರು ಇತರೆ ಸದಸ್ಯರನ್ನು ಗೌರವದಿಂದ ಕಾಣುತ್ತಾರೆ. - ಸುಧಾ ಎಂ.ಸಿ. ಕೊಲ್ಲೂರು, ಕೊಲ್ಲೂರು ಕುಟುಂಬದ ಯಜಮಾನಿ

PREV