ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 2ರಿಂದಲೇ ಚುನಾವಣಾ ಮಾದರಿ ನೀತಿ-ಸಂಹಿತೆ ಜಾರಿ ಜಾರಿಯಾಗಿರುತ್ತದೆ ಎಂದು ಅವರು ತಿಳಿಸಿದರು.
ಮೇ 9ರಂದು ಚುನಾವಣೆಯ ಅಧಿಸೂಚನೆ ಹೊರಡಿಸಲಿದ್ದು, ಮೇ 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಮೇ 17ರಂದು ನಡೆಯಲಿದ್ದು, ಮೇ 20 ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಜೂ.3ರಂದು ಬೆ.8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಜೂ.6ರಂದು ಬೆ.8 ಗಂಟೆಯಿಂದ ಮತಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.ನಾಮಪತ್ರಗಳ ನಮೂನೆಗಳನ್ನು ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಚುನಾವಣೆ ಶಾಖೆಯಿಂದ ಪಡೆಯಬಹುದು. ಭರ್ತಿ ಮಾಡಿದ ನಾಮಪತ್ರಗಳನ್ನು ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ‘ಕಾನ್ಫರೆನ್ಸ್ ಹಾಲ್’, ಎರಡನೇ ಮಹಡಿ, ಮಿನಿ ವಿಧಾನ ಸೌಧ, ಕಲಬುರಗಿಯಲ್ಲಿ ಮೇ 9ರಿಂದ 16ರ ವರೆಗೆ ಬೆ.11ರಿಂದ ಮ.3ರ ವರೆಗೆ ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಸಲ್ಲಿಸಬಹುದಾಗಿರುತ್ತದೆ. ಸ್ವೀಕೃತವಾದ ಎಲ್ಲಾ ನಾಮಪತ್ರಗಳನ್ನು ಮೇ 17ರಂದು ಬೆ.11 ಗಂಟೆಗೆ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ‘ಕಾನ್ಫರೆನ್ಸ್ ಹಾಲ್’ 2ನೇ ಮಹಡಿ, ಮಿನಿ ವಿಧಾನ ಸೌಧ, ಕಲಬುರಗಿಯಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 7 ಜಿಲ್ಲೆಗಳಲ್ಲಿ ಸದ್ಯಕ್ಕೆ 160 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತದಾರರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಮತಗಟ್ಟೆಗಳ ವಿವರಗಳನ್ನು ಎರಡು ದಿನಗಳಲ್ಲಿ ನೀಡುವಂತೆ ಏಳೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಅನ್ವಯಿಸುವ ಎಲ್ಲಾ ನಿಯಮಗಳು ಸಹ ಈ ಚುನಾವಣೆಗೆ ಅನ್ವಯಿಸುತ್ತವೆ. ಕಲಬುರಗಿ ಚುನಾವಣಾಧಿಕಾರಿಗಳ (ಪ್ರಾದೇಶಿಕ ಆಯುಕ್ತರ ಕಾರ್ಯಾಲಯ) ದೃಶ್ಯ ಮಾಧ್ಯಮ ತಂಡ ಹಾಗೂ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು ಇದು ಸಂಪೂರ್ಣ ಚುನಾವಣೆ ಪ್ರಕ್ರಿಯೇ ಮುಕ್ತಾಯಗೊಳ್ಳುವ 24/7 ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ದೂ. 08472-200255 ಈ ಸಂಖ್ಯೆಗೆ ಕರೆಮಾಡಿ ತಮ್ಮ ಅಹವಾಲು ಹಾಗೂ ದೂರುಗಳನ್ನು ವ್ಯಕ್ತಪಡಿಸಲು ಅವಕಾಶವಿರುತ್ತದೆ.
ಮತಗಟ್ಟೆ ಸಿಬ್ಬಂದಿಗಳಿಗೆ ಮತದಾನ ದಿನಾಂಕದಂದು ಬಿಸಿ ಊಟ ವ್ಯವಸ್ಥೆ ಕಲ್ಪಿಸಲು ಮತ್ತು ಅತೀ ಉಷ್ಣಾಂಶವಿರುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳು ಸೇರಿದಂತೆ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಅವರು ಉಪಸ್ಥಿತರಿದ್ದರು.