ಕನ್ನಡಪ್ರಭ ವಾರ್ತೆ, ತುಮಕೂರು
ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 10 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ತುಮಕೂರು ಜಿಲ್ಲೆಯವರು. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ ಬಿಜೆಪಿ ಮತ್ತು ಜೆಡಿಎಸ್ ತಲಾ 2 ಕ್ಷೇತ್ರದಲ್ಲಿ ಶಾಸಕರಿದ್ದಾರೆ. ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ ಕ್ಷೇತ್ರದಿಂದ ಒಟ್ಟು 1,84,000 ಮತದಾರರಿದ್ದರೆ ಜಿಲ್ಲೆಯಲ್ಲೇ 50 ಸಾವಿರ ಕ್ಕೂ ಹೆಚ್ಚು ಮತದಾರರಿರುವುದು ವಿಶೇಷ.
ಕಳೆದ ಬಾರಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಡಿ.ಟಿ. ಶ್ರೀನಿವಾಸ್ ಜಯ ಸಾಧಿಸಿದ್ದರು. ಹಾಗೆಯೇ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಜಯಗಳಿಸುತ್ತದೆ ಎಂಬುದು ಶಶಿ ಹುಲಿಕುಂಟೆ ಮಠ ಅವರ ಅಭಿಪ್ರಾಯ. ಆದರೆ ಆಗ್ನೇಯ ಪದವೀಧರ ಕ್ಷೇತ್ರ ತುಮಕೂರು ಜಿಲ್ಲೆಯಲ್ಲಿ ಯಾವತ್ತೂ ಬಿಜೆಪಿಗೆ ಭದ್ರ ಕೋಟೆ. ಈ ಬಾರಿ ಎರಡೂ ಪಕ್ಷಗಳು ಒಟ್ಟಾಗಿ ಎನ್ಡಿಎ ಅಭ್ಯರ್ಥಿಯಾಗಿರುವ ಕೆ.ಎಂ. ಸುರೇಶ ಅವರಿಗೆ ಬಲ ಬಂದಂತಾಗಿದೆ. ಕಣದಲ್ಲಿ 10 ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್ ಮತ್ತು ಎನ್ಡಿಎ ಅಭ್ಯರ್ಥಿ ನಡುವೆ ನೇರ ಹಣಾ ಹಣೆ ಇದೆ.ತುಮಕೂರು ನಗರ, ಗ್ರಾಮಾಂತರ, ಗುಬ್ಬಿ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕಾರ್ಯ ತುಮಕೂರು ತಾಲೂಕು ಕಚೇರಿಯಲ್ಲಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕಾರ್ಯ ತುಮಕೂರು ಉಪವಿಭಾಗಾಧಿಕಾರಿ ನ್ಯಾಯಾಲಯ ಸಭಾಂಗಣ, ಮಧುಗಿರಿ, ಶಿರಾ, ಕೊರಟಗೆರೆ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕಾರ್ಯ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಇನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಶಾಸಕರಿರುವುದರಿಂದ ಎಲ್ಲಕ್ಕೂ ಮಿಗಿಲಾಗಿ ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿರುವುದರಿಂದ ಈ ಬಾರಿಯೂ ಅತ್ಯಧಿಕ ಲೀಡ್ ಅನ್ನು ಜಿಲ್ಲೆಯ ಮತದಾರರು ನೀಡುತ್ತಾರೆಂಬುದು ಮೈತ್ರಿ ಪಕ್ಷದವರ ಆಂಬೋಣ.