ಮನೆಯಿಂದಲೇ ಮತದಾನ: ಶೇ. 96ರಷ್ಟು ಮತದಾನ

KannadaprabhaNewsNetwork | Published : Apr 29, 2024 1:32 AM

ಸಾರಾಂಶ

85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತನ ಮತದಾರರಿಗೆ ಹಾಗೂ ಕೋವಿಡ್ ಸೋಂಕಿತ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ 12 ಡಿ ಅಡಿ ನೋಂದಣಿ ಮಾಡಿಸಿದ್ದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತನ ಮತದಾರರಿಗೆ ಹಾಗೂ ಕೋವಿಡ್ ಸೋಂಕಿತ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಏಪ್ರೀಲ್ 27ರ ವರೆಗೆ ಶೇ. 96ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತ ಚುನಾವಣಾ ಆಯೋಗವು ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮೇ 7 ರಂದು ನಿಗದಿಪಡಿಸಿದಂತೆ, ಭಾರತ ಚುನಾವಣಾ ಆಯೋಗವು ಮಾರ್ಗಸೂಚಿ ಪ್ಯಾರಾ 15.2 ರಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ, ವಿಶೇಷ ಚೇತನ ಮತದಾರರಿಗೆ ಹಾಗೂ ಕೋವಿಡ್ ಸೋಂಕಿತ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಸೌಲಭ್ಯ ಕಲ್ಪಿಸಲು ನಿರ್ದೇಶಿಸಿದ್ದರ ಹಿನ್ನೆಲೆ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆಯನ್ನು ಏ. 25ರಂದು ಕೊಪ್ಪಳ, ಕುಷ್ಟಗಿ, ಗಂಗಾವತಿ, ಕನಕಗಿರಿ, ಮಸ್ಕಿ ಮತ್ತು ಸಿಂಧನೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗಿದ್ದು ಮತ್ತು ಸಿರಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏ.26ರಂದು ಹಾಗೂ ಯಲಬುರ್ಗಾದಲ್ಲಿ ಏ.27ರಂದು ಮತದಾನ ಮಾಡಲಾಗಿದೆ. ಅಂತಿಮವಾಗಿ 08-ಕೊಪ್ಪಳ ಲೋಕಸಭಾಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 1,361 ಹಿರಿಯ ನಾಗರಿಕ ಮತದಾರರಿದ್ದು, 576 ವಿಶೇಷ ಚೇತನ ಮತದಾರರು ಸೇರಿ ಒಟ್ಟು 1,937 ಮತದಾರರ ಪೈಕಿ 1,867 ಮತದಾರರಿಂದ ಮತದಾನವಾಗಿದೆ. ಇದರಲ್ಲಿ 1,304 ಹಿರಿಯ ನಾಗರಿಕರು ಹಾಗೂ 567 ವಿಶೇಷ ಚೇತನ ಮತದಾರರು ಮತ ಚಲಾಯಿಸಿದ್ದು, ಶೇ. 96ರಷ್ಟು ಮತದಾನವಾಗಿದೆ. ಎಲ್ಲ 08 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಸುಗಮವಾಗಿ ಮತ್ತು ಶಾಂತರೀತಿಯಿಂದ ಮುಕ್ತಾಯಗೊಂಡಿದೆ.

ಪ್ರತಿದಿನ ಮತದಾನ ಮುಗಿದ ನಂತರ ಅಂಚೆ ಮತ ಪತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರವಾರು ಕ್ರೂಢೀಕರಿಸಿ ನಿಯಮಾನುಸಾರ ಚುನಾವಣಾಧಿಕಾರಿಗಳ ಕಸ್ಟಡಿಗೆ ಒಪ್ಪಿಸಲು ಕ್ರಮ ವಹಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Share this article