ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ದೇಶದ ನಾಗರಿಕರಿಗೆ ಅವರಿಗಿರುವ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸುವುದು, ಯಾವುದೇ ಆಮಿಷಕ್ಕೆ ಒಳಗಾಗದೆ ದೇಶದ ಅಭಿವೃದ್ಧಿಗಾಗಿ ನಿಷ್ಪಕ್ಷಪಾತವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸುವುದು, ಪ್ರತಿಯೊಬ್ಬರ ಜವಾಬ್ದಾರಿ ಆಗಿದ್ದು ಮತದಾನ ಸಂವಿಧಾನ ನಮಗೆಲ್ಲರಿಗೂ ನೀಡಿರುವ ಅತ್ಯಮೂಲ್ಯ ಹಕ್ಕಾಗಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಸುನಿತಾ ಹೇಳಿದರು.ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ , ಜೆಎಸ್ಎಸ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗೆ ಅರ್ಹ ಪ್ರತಿನಿಧಿ ಆರಿಸುವುದು ಕೂಡಾ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜ.25 ರಂದು ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ತೇಜಿಸುವ ದೃಷ್ಟಿಯಿಂದ ಭಾರತ ಸರ್ಕಾರವು 1950 ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ಸವಿನೆನಪಿಗಾಗಿ 2011ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಿತು. ಅಂದಿನಿಂದ ಪ್ರತಿವರ್ಷ ಜ.25 ರಂದು ಈ ವಿಶೇಷ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಬರಲಾಗುತ್ತಿದೆ. ಪ್ರತಿವರ್ಷವೂ ವಿವಿಧ ಥೀಮ್‌ಗಳ ಅಡಿಯಲ್ಲಿ ಈ ವಿಶೇಷ ದಿನ ಆಚರಣೆ ಮಾಡಲಾಗುತ್ತದೆ. ಈ ವರ್ಷದ ಥೀಮ್ ಮತದಾನ ಮಾಡೋದಕ್ಕಿಂತ ದೊಡ್ಡದೇನು ಇಲ್ಲ, ನಾನು ಖಚಿತವಾಗಿ ಮತ ಚಲಾಯಿಸುತ್ತೇನೆ, 18ವರ್ಷ ತುಂಬಿದ ಎಲ್ಲ ವಯಸ್ಕರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವುದು, ಅವರಿಗೆ ಅವರ ಮತದಾನದ ಬಗ್ಗೆ ಅರಿವು ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ ಎಂದರು.
ಈ ವೇಳೆ ವಕೀಲರ ಸಂಘದ ಕಾರ್ಯದರ್ಶಿ ಸಿ.ಬಿ. ಮಹೇಶ್ ಕುಮಾರ್ ಮಾತನಾಡಿ, ಮತದಾನದ ಹಕ್ಕು ವಯಸ್ಕ ಮತದಾನದ ಆಧಾರದ ಮೇಲೆ ಆರ್ಟಿಕಲ್ 326 ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಸಾಂವಿಧಾನಿಕ ಹಕ್ಕಾಗಿದೆ, ಈ ಹಿನ್ನೆಲೆ ಸರ್ಕಾರ ರಚನೆ ನಿಟ್ಟಿನಲ್ಲಿ ಮತದಾರ ಪಾತ್ರವೇ ಅಂತಿಮ, ಮತದಾರರ ತೀರ್ಪು ಎಲ್ಲರಿಗೂ ಗೌರವಿಸುವಂತದ್ದೆ ಆಗಿದೆ ಎಂದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಎಂ. ಮಹೇಶ, ತಹಸೀಲ್ದಾರ್ ಬಸವರಾಜ, ಶಿಕ್ಷಣಾಧಿಕಾರಿ ಮಂಜುಳಾ. ವಕೀಲರ ಸಂಘದ ಖಜಾಂಚಿರೋಹಿತ್, ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲರಾದ ಕೊಂಗಳಪ್ಪ, ಮಹದೇವಸ್ವಾಮಿ ಇನ್ನಿತರರಿದ್ದರು.