ಸದೃಢ ಭಾರತ ನಿರ್ಮಾಣಕ್ಕೆ ಮತದಾನವೇ ಆಧಾರ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಮತದಾನ ಪದ್ಧತಿ ಪ್ರಜಾಪ್ರಭತ್ವ ದೇಶದ ಹೃದಯದಂತೆ. ಜನನಾಯಕರನ್ನು, ಸರ್ಕಾರವನ್ನು ಆಯ್ಕೆ ಮಾಡಿ, ಅವರಿಂದ ಸೇವ ಪಡೆಯುವ ಪರಿಣಾಮಕಾರಿ ಅಸ್ತ್ರ ಮತದಾನ. ಈ ಕಾರಣಕ್ಕೆ ಮತದಾನ ಮಹತ್ವ ಪಡೆದಿದ್ದು, ಮೂಲಹಕ್ಕುಗಳ ಪಾಲನೆ ಜೊತೆಗೆ ಆರೋಗ್ಯ ದೃಷ್ಟಿಯಿಂದಲೂ ಸಂಪೂರ್ಣ ಮತದಾನ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್‌ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಮತದಾನವು ಮಹತ್ತರ ಪಾತ್ರ ವಹಿಸುತ್ತಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಮತದಾನವು ನಮ್ಮ ಮೂಲಹಕ್ಕುಗಳ ಜತೆಯಲ್ಲಿ ಸಮಾಜದ ಆರೋಗ್ಯದ ದೃಷ್ಠಿಯಿಂದಲೂ ತುಂಬಾ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್ ಅಭಿಪ್ರಾಯಪಟ್ಟರು.

ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಐಕ್ಯೂಎಸಿ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ರೋವರ್, ರೇಂಜರ್ ಘಟಕಗಳ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ನಮ್ಮ ಮತದಾನ ಸದೃಢ ಭಾರತ ನಿರ್ಮಾಣಕ್ಕೆ ಆಧಾರ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವ ದೃಷ್ಠಿಯಿಂದ ಮತದಾನವು ತುಂಬಾ ಮುಖ್ಯವಾದ ಕರ್ತವ್ಯ ಆಗಿದೆ. ಅಮೂಲ್ಯವಾದ ಮತವನ್ನು ಮಾರಿಕೊಳ್ಳದೇ ಪಾವಿತ್ರ್ಯತೆ ಕಾಪಾಡಿ, ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ದೇಶವನ್ನು ಭ್ರಷ್ಟಮುಕ್ತಗೊಳಿಸಬೇಕು. ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಜಾಗೃತಿ ಜಾಥಾ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಟಿಎನ್‌ಸಿಸಿ ಕಾಲೇಜಿನ ಪ್ರಾಚಾರ್ಯೆ ಪ್ರೊ. ಮಮತಾ ಪಿ.ಆರ್. ಮಾತನಾಡಿ, ವಿದ್ಯಾರ್ಥಿಗಳು ಮತದಾನದ ಬಗ್ಗೆ ಸಮಗ್ರ ಮಾಹಿತಿ ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದ್ದು, ಅದರ ಮಹತ್ವ ಅರಿತುಕೊಂಡು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಮತದಾನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ನಮ್ಮ ಹಕ್ಕನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನ ಗುರುತೀನ ಚೀಟಿ ಮಾಡಿಸಿಕೊಂಡು ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಬೋಧನೆ ಮಾಡಲಾಯಿತು. ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಎಸ್. ಜಗದೀಶ್, ಪ್ರೊ. ಕೆ.ಎಂ. ನಾಗರಾಜ್‌, ಪ್ರೊ. ಎನ್‌.ಮಂಜುನಾಥ್, ಬಿ.ಎನ್‌. ಪ್ರವೀಣ, ಆರ್‌.ರಂಗನಾಥ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- - - -30ಎಸ್‌ಎಂಜಿಕೆಪಿ02:

ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಐಕ್ಯೂಎಸಿ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ರೋವರ್, ರೇಂಜರ್ ಘಟಕಗಳ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್ ಚಾಲನೆ ನೀಡಿದರು.

Share this article