ಕನ್ನಡಪ್ರಭ ವಾರ್ತೆ ಕೋಲಾರಪ್ರಾಮಾಣಿಕವಾಗಿ ಮತ ಚಲಾವಣೆ ಮಾಡಿದಾಗ ಮಾತ್ರ ಜವಾಬ್ದಾರಿಯುತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾಧ್ಯ ಎಂದು ಸಂಸದ ಎಂ.ಮಲ್ಲೇಶ್ ಬಾಬು ಅಭಿಪ್ರಾಯಪಟ್ಟರು. ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಯಾವುದೇ ಅಮಿಷಗಳಿಗೆ ಬಲಿಯಾಗದೆ ಜನಪ್ರತಿಗಳನ್ನು ಆಯ್ಕೆ ಮಾಡಿದಾಗ ಮೂಲಭೂತ ಸೌಲಭ್ಯಗಳು ಹಾಗೂ ಅಭಿವೃದ್ದಿ ಕುರಿತು ಪ್ರಶ್ನಿಸುವ ನೈತಿಕತೆ ಮತದಾರರಿಗೆ ಇರುತ್ತದೆ. ಜನಪ್ರತಿನಿಧಿಗಳ ಕರ್ತವ್ಯ ನಿರ್ಲಕ್ಷತೆ ಬಗ್ಗೆ ಪ್ರಶ್ನಿಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದು ತಿಳಿಸಿದರು.ಸಾಮಾಜಿಕ ಜವಾಬ್ದಾರಿ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಮತದಾನದ ತಾಕತ್ತು ಪ್ರಜಾಪ್ರಭುತ್ವದಲ್ಲಿ ತಿಳಿಯುತ್ತದೆ. ಮತದಾನದ ಘನತೆ ಪ್ರಜಾಪ್ರಭುತ್ವವು ಎತ್ತಿ ಹಿಡಿಯುವುದಾಗಿದೆ. ನನ್ನ ಮತ ನನ್ನ ಹಕ್ಕು ಜೂತೆಗೆ ಸಾಮಾಜಿಕ ಜವಾಬ್ದಾರಿ ಆಗಿದೆ ಎಂಬುವುದಾದರೆ ಅರ್ಥಪೂರ್ಣವಾಗುವುದು. ಇಂದಿನ ಪೀಳಿಗೆಗೆ ಪ್ರಜಾಪ್ರಭುತ್ವದ ಮಹತ್ವದ ಅರಿವು ಇಲ್ಲ. ಅನೇಕ ದೇಶಗಳಲ್ಲಿ ಸ್ವಾತಂತ್ರ್ಯ ರಕ್ತಪಾತದಿಂದ ಪಡೆದರೆ ಭಾರತವು ಅಹಿಂಸೆಯ ಮೂಲಕ ಪಡೆದಿರುವುದನ್ನು ಮರೆಯಬಾರದು ಎಂದರು.ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ
ಸ್ವಾತಂತ್ರ್ಯ ಸ್ವೇಚ್ಚಾಚಾರ ಆಗದಂತೆ ಕಡಿವಾಣ ಹಾಕಬೇಕು, ವಿಶ್ವದಲ್ಲೆ ಪ್ರಜಾಪ್ರಭುತ್ವ ಆಡಳಿತವೇ ಮಹತ್ವದ ಬಹುಮತವಾಗಿದೆ. ಪ್ರಜಾಪ್ರಭುತ್ವದ ಅಧಿಕಾರ ಬಳಸಿ ಸಮಾಜ ಕಟ್ಟುವಂತಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವಂತ ಮನೋಭಾವನೆ ಬೆಳೆಸಿಕೊಳ್ಳದಿದ್ದರೆ ಪ್ರಜಾ ಪ್ರಭುತ್ವಕ್ಕೆ ಧಕ್ಕೆಯುಂಟಾಗುವ ಸಂಭವವಿದೆ ಎಂದು ನೇಪಾಳ ಮತ್ತು ಶ್ರೀಲಂಕಾದ ಪರಿಸ್ಥಿತಿಯನ್ನು ಉದಾಹರಣೆ ನೀಡಿದರು.ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಬುದ್ದತೆ ಪಡೆದಿರುವ ದೇಶವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳ ಆಶಯಗಳಿಗೆ ಪೂರಕವಾದ ಹೋರಾಟಗಳು ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗಲಿದೆ. ನಮ್ಮ ದೇಶವನ್ನು ಪ್ರೀತಿಸುವುದು ನಮ್ಮ ತಾಯಿ ಪ್ರೀತಿಸಿದಷ್ಟೇ ಮೌಲ್ಯಯುತವಾದದ್ದು ಎಂದು ಯಾರೂ ಹೇಳಬೇಕಾಗಿಲ್ಲ. ೧೪೦ ಕೋಟಿ ಜನಸಂಖ್ಯೆ ಹೊಂದಿರುವಂತ ಭಾರತವು ವಿಶ್ವದಲ್ಲೆ ಬೃಹತ್ ದೇಶವಾಗಿದೆ. ಭಾರತದ ಮೇಲೆ ಆಗಿರುವಂತ ಅತಿಕ್ರಮಣದ ದಾಳಿಗಳು ಬೇರೆ ಯಾವ ದೇಶದ ಮೇಲೂ ಆಗಿಲ್ಲ. ಆದರೂ ನಾವು ಸಧೃಢವಾಗಿ ಇದ್ದೇವೆ ಎಂದರೆ ಅದಕ್ಕೆ ಸಂವಿಧಾನದಲ್ಲಿನ ಮೌಲ್ಯಗಳೇ ಕಾರಣ ಎಂದು ಪ್ರತಿಪಾದಿಸಿದರು.ಲೋಕ್ ಅದಾಲತ್ ಬಳಸಿಕೊಳ್ಳಿ
ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ನಟೇಶ್.ಆರ್ ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಡಿಯಲ್ಲಿ ಜಿಲ್ಲೆಯ ೬ ತಾಲ್ಲೂಕುಗಳು ಬರಲಿದೆ, ಸೆ.೧೩ರಂದು ಜಿಲ್ಲೆಯಲ್ಲಿ ೩ನೇ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಬಾಕಿ ಇರುವಂತ ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿರುವುದರಿಂದ ಸಮಯ, ಶುಲ್ಕ ಉಳಿತಾಯವಾಗಿದೆ. ಸಾರ್ವಜನಿಕರು ಇಂಥಹ ಅವಕಾಶಗಳನ್ನು ಸದ್ಬಳಿಸಿಕೊಳ್ಳಬೇಕೆಂದು ಕರೆ ನೀಡಿದರು.ಕಾಯಂ ಜನತಾ ನ್ಯಾಯಾಲಯವು ಬೆಂಗಳೂರಿನಲ್ಲಿರುವುದನ್ನು ಕೋಲಾರಕ್ಕೂ ತರಲಾಗಿದ್ದು, ಇದರ ಉಪಯುಕ್ತ ಸೇವೆ ಅವಶ್ಯಕ ಇರುವವರು ಬಳಸಿಕೊಳ್ಳಬಹುದಾಗಿದೆ. ಇದರ ವ್ಯಾಪ್ತಿಯ ಪರಿಹಾರ ಒಂದು ಕೋಟಿ ರೂ.ವರೆಗೆ ಇರುವುದು. ಸಂವಿಧಾನದಲ್ಲಿ ಮತದಾನ ಹಕ್ಕು ಪ್ರಥಮವಾಗಿದೆ ಎಂದು ಹೇಳಿದರು. ಪ್ರಜಾತಂತ್ರ ಕುರಿತು ಉಪನ್ಯಾಸಮಹಿಳಾ ಐಟಿಐ ಡೀನ್ ನಾರಾಯಣಸ್ವಾಮಿ ಸಂವಿಧಾನದ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಶ್ರೀನಿವಾಸ್ ಸ್ವಾಗತಿಸಿದರು. ಜಿಪಂ ಸಿಇಓ ಡಾ.ಪ್ರವೀಣ್ ಬಾಗೇವಾಡಿ, ಎಸ್‌ಪಿ ನಿಖಿಲ್.ಬಿ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಪಂ ಡಿಎಸ್ ರಮೇಶ್, ಎಸಿ ಡಾ.ಮೈತ್ರಿ, ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ಕೌಶಲ್ಯಾಭಿವೃದ್ದಿ ಇಲಾಖೆ ಶ್ರೀನಿವಾಸ್, ಗಣಿ-ಭೂ ವಿಜ್ಞಾನ ಇಲಾಖೆ ನಿದೇಶಕ ತಿಪ್ಪೇಸ್ವಾಮಿ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯಾಭಿವೃದ್ದಿ ಇಲಾಖೆ ಉಪನಿರ್ದೇಶಕ ರವಿಚಂದ್ರನ್, ಮುಖಂಡರಾದ ಡಾ.ಚಂದ್ರಶೇಖರ್, ಪಂಡಿತ್ ಮುನಿವೆಂಕಟಪ್ಪ, ಬೆಳಮಾರನಹಳ್ಳಿ ಆನಂದ್, ಅಬ್ಬಣಿ ಶಿವಪ್ಪ ಇದ್ದರು.