ಜಿಲ್ಲೆಯಲ್ಲಿ 1229 ಮತಗಟ್ಟೆಗಳು, 2 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ನಿಯೋಜನೆ
ಕರ್ನಾಟಕದಲ್ಲಿ ಮೊದಲನೇ ಹಂತದಲ್ಲಿ ಏ.26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಉಡುಪಿ- ಚಿಕ್ಕ ಮಗಳೂರು ಕ್ಷೇತ್ರದಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಮುಕ್ತ ಹಾಗೂ ವ್ಯವಸ್ಥಿತವಾಗಿ ಮತದಾನ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಈ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಮತ್ತು ಹಾಸನ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1229 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಪ್ರತಿ ಮತಗಟ್ಟೆಗೆ ಶೇ.125 ರಂತೆ ವಿದ್ಯುನ್ಮಾನ ಮತ ಯಂತ್ರಗಳನ್ನು ಮತ್ತು ಅದಕ್ಕೆ ಶೇ.115 ರಷ್ಟು ವಿವಿ ಪ್ಯಾಟ್‌ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಮತದಾನ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು 5400 ಸಿಬ್ಬಂದಿ ನಿಯೋಜನೆಗೆ ಮಾಡಲಾಗಿದ್ದು, ಈಗಾಗಲೇ 2 ಸುತ್ತು ತರಬೇತಿ ನೀಡಲಾಗಿದೆ. ಗುರುವಾರದಂದು 3ನೇ ಸುತ್ತಿನ ತರಬೇತಿ ನೀಡುವ ಮೂಲಕ ಮತಗಟ್ಟೆ ಅಧಿಕಾರಿಗಳಿಗೆ ಉಸ್ತುವಾರಿ ನೀಡಲಾಗಿದೆ ಎಂದು ಹೇಳಿದರು.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಊಟ ತಿಂಡಿ ಹಾಗೂ ಮತಯಂತ್ರಗಳ ಸರಬರಾಜಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳ ಜೊತೆಗೆ ಪ್ರತಿ ಮತಗಟ್ಟೆಗೆ ಆರೋಗ್ಯ ಕಿಟ್ ನೀಡಲಾಗಿದ್ದು ಮತಗಟ್ಟೆ ಸಿಬ್ಬಂದಿ ಅಥವಾ ಮತದಾರರಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.ಈ ಬಾರಿ ತಾಪಮಾನ ಹೆಚ್ಚಾಗಿರುವುದರಿಂದ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 35 ಹಾಗೂ ತರೀಕೆರೆ ಕ್ಷೇತ್ರದಲ್ಲಿ 40 ಹೆಚ್ಚುವರಿ ಕೊಠಡಿಗಳನ್ನು ಕಾಯ್ದಿಸಿಕೊಳ್ಳಲಾಗಿದೆ. ಮಲೆನಾಡು ಭಾಗದಲ್ಲಿ ಮಳೆ ಬರುವುದರಿಂದ ಪರಿಸ್ಥಿತಿ ಗನುಗುಣವಾಗಿ ಹೆಚ್ಚುವರಿ ಕೊಠಡಿ ಹಾಗೂ ಟೆಂಟ್ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದು ಆಂಬುಲೆನ್ಸ್ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಶೇ.24 ರಷ್ಟು ಮತದಾನವಾಗಿದೆ ಎಂದು ಹೇಳಿದರು.
---ಬಾಕ್ಸ್--
ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ವಿಶೇಷವಾಗಿ ಪರಿಗಣಿಸಿ ಅರಣ್ಯ ಇಲಾಖೆ ಸಿಬ್ಬಂದಿ ಯನ್ನು ನೇಮಿಸಲಾಗಿದೆ. ಗೃಹರಕ್ಷಕರ ನೆರವು ಪಡೆಯಲಾಗಿದ್ದು ಯಾರಿಗೂ ತೊಂದರೆ ಆಗದಂತೆ ಊಟ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.ಮತದಾನವಾದ ನಂತರ ಮತ ಚಲಾಯಿಸಲ್ಪಟ್ಟ ವಿದ್ಯುನ್ಮಾನ ಮತಯಂತ್ರಗಳನ್ನು ಕಂಟೇನರ್ ಮೂಲಕ ಬೆಂಗಾವಲು ಪಡೆಯೊಂದಿಗೆ ಕೊಪ್ಪದವರೆಗೆ ಸಾಗಿಸಿ ಅಲ್ಲಿಂದ ಉಡುಪಿಯ ಸ್ಟ್ರಾಂಗ್ ರೂಂಗೆ ಸಾಗಿಸಲಾಗುವುದೆಂದು ಹೇಳಿದರು.ಪೋಟೋ ಫೈಲ್ ನೇಮ್ 24 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಡಿಸಿ ಮೀನಾ ನಾಗರಾಜ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಇದ್ದರು.