ಪ್ರತಿ ಮತವೂ ಅಮೂಲ್ಯ, ತಪ್ಪದೆ ಹಕ್ಕು ಚಲಾಯಿಸಿ; ಆರ್.ಎಚ್.ಸುಕನ್ಯ

KannadaprabhaNewsNetwork | Published : Apr 25, 2024 1:12 AM

ಸಾರಾಂಶ

18 ವರ್ಷ ಪೂರೈಸಿರುವ ಪ್ರತಿಯೊಬ್ಬರೂ ಚುನಾವಣೆಗಳಲ್ಲಿ ಭಾಗವಹಿಸುವ ಅವಕಾಶವಿದೆ. ಅವರಿಗೆ ಮತದಾನದ ಹಕ್ಕಿನ ಬಗ್ಗೆ ತಿಳಿ ಹೇಳಬೇಕು. ಮತದಾನದ ದಿನದಂದು ನಿಗದಿತ ಅವಧಿಯಲ್ಲಿ ಎಲ್ಲರೂ ತಮ್ಮ ತಮ್ಮ ಮತಕೇಂದ್ರಗಳಿಗೆ ತೆರಳಿ ಓಟು ಹಾಕುವಂತೆ ತಿಳಿ ಹೇಳಬೇಕು.

ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಅತ್ಯಮೂಲ್ಯವಾಗಿದ್ದು, ಸಂವಿಧಾನ ಬದ್ಧವಾಗಿ ಲಭಿಸಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ತಪ್ಪದೇ ಚಲಾಯಿಸಬೇಕೆಂದು ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಆರ್.ಎಚ್.ಸುಕನ್ಯ ಕರೆ ನೀಡಿದರು.

ಉಪ್ಪಾರಹಳ್ಳಿ ಸರ್ಕಲ್‌ನಿಂದ ಜನಶಿಕ್ಷಣ ಸಂಸ್ಥೆ, ವರದಕ್ಷಿಣೆ ವಿರೋಧಿ ವೇದಿಕೆ, ನಗರ ಸಾಂತ್ವನ ಕೇಂದ್ರ ಹಾಗೂ ಇತರೆ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಆರಂಭಿಸಲಾದ ಮತದಾನ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತೆ ಕರೆ ನೀಡಿದರು.

ಮತದಾನ ಒಂದು ಪವಿತ್ರ ಹಕ್ಕಾಗಿರುವ ಕಾರಣ ಯಾರ ಮಾತಿಗೂ, ಯಾವ ಆಮಿಷಗಳಿಗೂ ಒಳಗಾಗಬಾರದು. ಅಭಿವೃದ್ಧಿಯ ಚಿಂತನೆಯನ್ನು ಹೊಂದಿರುವ ಅಭ್ಯರ್ಥಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಮತ ಹಾಕಲು ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಾತಂತ್ರ್ಯವಿದೆ. ಇದು ಪ್ರತಿಯೊಬ್ಬ ಪ್ರಜೆಯ ಹಕ್ಕೂ ಕೂಡ. ತಮಗೆ ಯಾರಿಗೆ ಮತ ಹಾಕಬೇಕು ಅನ್ನಿಸುವುದೋ ಅಂತಹವರಿಗೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಹಕ್ಕನ್ನು ನಾವೇ ಗೌರವಿಸಿಕೊಳ್ಳಬೇಕಾಗಿದೆ ಎಂದರು.

ತುಮಕೂರು ನಗರ ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ ಮಾತನಾಡಿ, 18 ವರ್ಷ ಪೂರೈಸಿರುವ ಪ್ರತಿಯೊಬ್ಬರೂ ಚುನಾವಣೆಗಳಲ್ಲಿ ಭಾಗವಹಿಸುವ ಅವಕಾಶವಿದೆ. ಅವರಿಗೆ ಮತದಾನದ ಹಕ್ಕಿನ ಬಗ್ಗೆ ತಿಳಿ ಹೇಳಬೇಕು. ಮತದಾನದ ದಿನದಂದು ನಿಗದಿತ ಅವಧಿಯಲ್ಲಿ ಎಲ್ಲರೂ ತಮ್ಮ ತಮ್ಮ ಮತಕೇಂದ್ರಗಳಿಗೆ ತೆರಳಿ ಓಟು ಹಾಕುವಂತೆ ತಿಳಿ ಹೇಳಬೇಕು ಎಂದರು.

ವಿದ್ಯಾರ್ಥಿನಿ ಸಿಂಚನ ಮಾತನಾಡಿ, ಯುವ ಜನತೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ತಮ್ಮ ಕೆಲಸ, ಕಾರ್ಯಗಳು ಏನೇ ಇದ್ದರೂ ಅದನ್ನು ಬದಿಗೊತ್ತಿ ಮತದಾನದ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಉತ್ತಮರನ್ನು ಆಯ್ಕೆ ಮಾಡಬೇಕು ಎಂದರು.

ಲೇಖಕಿ ಕಮಲಾ ರಾಜೇಶ್, ವರದಕ್ಷಿಣೆ ವಿರೋಧಿ ವೇದಿಕೆಯ ಗಂಗಲಕ್ಷ್ಮೀ, ಸಾಂತ್ವನ ಕೇಂದ್ರದ ಯುವರಾಣಿ, ನೀಲಮ್ಮ, ಸಾಯಿಬಾಬಾ ಕಂಪ್ಯೂಟರ್‌ನ ವೇದಾ, ಸುಜಾತ, ಗೀತಾ ಮತ್ತಿತರರು ಮಾತನಾಡಿದರು.

Share this article