ಬಿರು ಬಿಸಿಲಿನ ನಡುವೆಯೂ ಉತ್ಸಾಹದಿಂದ ಮತ ಚಲಾವಣೆ

KannadaprabhaNewsNetwork |  
Published : Apr 27, 2024, 01:16 AM IST
ಚಿತ್ರ 3 | Kannada Prabha

ಸಾರಾಂಶ

ಚಿತ್ರದುರ್ಗ ಲೋಕಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಿರಿಯೂರು ತಾಲೂಕಿನಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದು, ಕಂಡುಬಂತು.

ಹಿರಿಯೂರು: ಚಿತ್ರದುರ್ಗ ಲೋಕಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಿರಿಯೂರು ತಾಲೂಕಿನಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದು, ಕಂಡುಬಂತು. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಬಿರುಸಿನ ಮತದಾನ ನಡೆದು ಮಧ್ಯಾಹ್ನ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ಆಗೊಬ್ಬರು ಈಗೊಬ್ಬರಂತೆ ಮಧ್ಯಾಹ್ನದ ಹೊತ್ತು ಮತದಾನ ಮಾಡಲು ಜನ ಬರುತ್ತಿದ್ದು, ಬಿಸಿಲಿನ ತಾಪಕ್ಕೆ ಜನ ಬೇಸತ್ತಿದ್ದಂತೆ ಕಂಡಿತು. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಶೇ.37ರಷ್ಟು ಮತ್ತು ಸಂಜೆ 5 ಗಂಟೆಗೆ ಶೇ.65.97ರಷ್ಟು ಮತದಾನವಾಗಿತ್ತು.

ಎಲ್ಲಾ ಕಡೆಯೂ ಸೂಕ್ತ ವ್ಯವಸ್ಥೆ ಮತ್ತು ಬಂದೋಬಸ್ತ್ ಮಾಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತ ಮತದಾನ ನಡೆಯಿತು. ತಾಲೂಕಿನ ಕಾಟನಾಯಕನಹಳ್ಳಿಯಲ್ಲಿ ಕುಡಿಯುವ ನೀರಿನ ಅಭಾವದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ ಹಾಕದೆ ಇದ್ದದ್ದರಿಂದ ಮತಗಟ್ಟೆ ಸಂಜೆ 4ರವರೆಗೆ ಖಾಲಿ ಖಾಲಿಯಾಗಿತ್ತು.

ಆನಂತರ ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ತಹಸೀಲ್ದಾರ್ ರಾಜೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡಿದ ಮೇಲೆ ಎಲ್ಲರೂ ಮತ ನೀಡಲು ಒಪ್ಪಿದ್ದರಿಂದ ಮತದಾನ ಆರಂಭವಾಯಿತು. ನಗರದ 20ನೇ ವಾರ್ಡ್ ನಿವಾಸಿ ಎಚ್.ಎ.ಸತ್ಯ ಬೆಳಗ್ಗೆ ತಮ್ಮ ವಿವಾಹ ಮುಗಿಸಿಕೊಂಡು ಮದುವೆ ಸ್ಥಳದಿಂದ ನೇರವಾಗಿ ಬಂದು 174ನೇ ಬೂತ್‌ನಲ್ಲಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ನಗರದ 180ನೇ ಮತಗಟ್ಟೆಯಲ್ಲಿ ಅಣಕು ಮತದಾನ ಮಾಡುವಾಗ ಇವಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡಿದ್ದರಿಂದ ಮತ ಯಂತ್ರ ಬದಲಿಸಲಾಯಿತು. ನೆಹರೂ ಮೈದಾನದ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಿರುವ ಸಖಿ ಮತದಾನ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭೇಟಿ ನೀಡಿದ್ದರು.

ಉಳಿದಂತೆ ಎಲ್ಲಾ ಕಡೆಯೂ ಬಿಸಿಲಿನ ತಾಪದ ನಡುವೆಯೂ ಯಾವುದೇ ಅಹಿತಕರ ಘಟನೆ ನಡೆಯದೇ ಮತದಾನ ನಡೆಯಿತು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ