ಜನಪದ ಕಲಾವಿದನಿಂದ ಮತದಾನ, ನೀರಿನ ಮಿತವ್ಯಯದ ಜಾಗೃತಿ

KannadaprabhaNewsNetwork |  
Published : Mar 30, 2024, 12:55 AM IST
ಫೋಟೋ : ೨೯ಎಚ್‌ಎನ್‌ಎಲ್6 | Kannada Prabha

ಸಾರಾಂಶ

ಕಾಮನ ಹಬ್ಬ ಬಂತೆಂದರೆ ಒಂದು ಹೊಸ ವೇಷದ ಮೂಲಕ ಇಡೀ ಹಾನಗಲ್ಲಿನಲ್ಲಿ ಸುತ್ತಿ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಜನಪದ ಕಲಾವಿದ ರವಿ ಲಕ್ಷ್ಮೇಶ್ವರ ಈ ಬಾರಿ ಕಾಲಜ್ಞಾನಿ ಬಾಲಬಸವಣ್ಣನ ವೇಷದಲ್ಲಿ ನೀರಿನ ಮಿತವ್ಯಯ ಮತ್ತು ಮತದಾನದ ಕುರಿತು ಜಾಗೃತಿ ಸಂದೇಶ ನೀಡಿ ಹಬ್ಬಕ್ಕೆ ಮೆರುಗು ತಂದಿದ್ದಾರೆ.

ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲಕಾಮನ ಹಬ್ಬ ಬಂತೆಂದರೆ ಒಂದು ಹೊಸ ವೇಷದ ಮೂಲಕ ಇಡೀ ಹಾನಗಲ್ಲಿನಲ್ಲಿ ಸುತ್ತಿ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಜನಪದ ಕಲಾವಿದ ರವಿ ಲಕ್ಷ್ಮೇಶ್ವರ ಈ ಬಾರಿ ಕಾಲಜ್ಞಾನಿ ಬಾಲಬಸವಣ್ಣನ ವೇಷದಲ್ಲಿ ನೀರಿನ ಮಿತವ್ಯಯ ಮತ್ತು ಮತದಾನದ ಕುರಿತು ಜಾಗೃತಿ ಸಂದೇಶ ನೀಡಿ ಹಬ್ಬಕ್ಕೆ ಮೆರುಗು ತಂದಿದ್ದಾರೆ.ನಾಲ್ಕನೇ ತರಗತಿಯಿಂದಲೇ ಹಾಡು, ನಾಟಕ, ವೇಷಭೂಷಣ ಸ್ಪರ್ಧೆಗಳಲ್ಲಿ ವಿಶೇಷ ಆಸಕ್ತಿ ಉಳ್ಳವರಾದ ಇವರು, ನಾಟಕ ಕಲಾವಿದರೂ ಹೌದು. ಕಂಪನಿ ನಾಟಕದಲ್ಲೂ ಪಾತ್ರ ಮಾಡಿದ್ದಾರೆ. ಅಣ್ಣ ತಂಗಿ, ಮೂವರು ಮೂರ್ಖರು, ಸಿಂಧೂರ ಲಕ್ಷ್ಮಣ, ಗಡಿದುರ್ಗವ್ವ, ಹೆಂಡತಿಯೇ ನಿನಗೆ ನಮೋ ಸೇರಿದಂತೆ ೨೦ಕ್ಕೂ ಅಧಿಕ ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ.ವೇಷಭೂಷಣದಲ್ಲಿ ಬಾಲ್ಯದಿಂದಲೂ ಆಸಕ್ತಿ ಹೊಂದಿದ ರವಿ ಲಕ್ಷ್ಮೇಶ್ವರ ಹತ್ತಾರು ವರ್ಷಗಳಿಂದ ಕಾಮನ ಹಬ್ಬದಲ್ಲಿ ರಾಮ ಲಕ್ಷ್ಮಣ ಸೀತಾ ಹನುಮಂತ, ರಾವಣ, ಯಮಧರ್ಮ, ಕಾಲಭೈರವ, ಮಂತ್ರವಾದಿ, ಶಿವ, ದುರಗಮುರುಗಿ, ಶರೀಫ ಶಿವಯೋಗಿ, ಕನಕದಾಸ, ಹುಲಿ, ಪವಾಡ ಪುರುಷ ಸಿದ್ದಪ್ಪಾಜಿ ವೇಷದ ಮೂಲಕ ಆಯಾ ಕಾಲಕ್ಕೆ ಬೇಕಾಗುವ ಜಾಗೃತಿ ಸಂದೇಶಗಳನ್ನು ಸಾರುತ್ತ ಬಂದಿದ್ದಾರೆ. ಹತ್ತು ವರ್ಷಗಳಿಂದ ಇಂಥ ವೇಷಭೂಷಣಕ್ಕೆ ಮುಂದಾಗಿದ್ದಾರೆ.ಚಿಕ್ಕಂದಿನಲ್ಲಿ ಹಿರಿಯರು ಹಾಕುತ್ತಿದ್ದ ವೇಷಭೂಷಣಗಳನ್ನು ನೋಡುತ್ತ ನನಗೂ ಮಾಡುವ ಹಂಬಲ. ಕಿತ್ತೂರ ಯಲ್ಲಪ್ಪನವರು, ಶಂಕರಪ್ಪ ಕೊಲ್ಲಾಪೂರ, ರೇವಡಿಗಾರ ಬಾಬು, ವಾಮನರಾವ ಏಸಕ್ಕನವರ, ಕಬ್ಬೂರ ಕರಿಯಪ್ಪ ಮೊದಲಾದವರ ಹಾಕುತ್ತಿದ್ದ ವೇಷಭೂಷಣ ನನಗೆ ಸ್ಫೂರ್ತಿ ಎನ್ನುತ್ತಾರೆ ರವಿ.ಪ್ರಸ್ತುತ ವರ್ಷದ ಕಾಲಜ್ಞಾನಿ ಬಾಲಬಸವಣ್ಣ ವೇಷಭೂಷಣದಲ್ಲಿ ಗುರುವಾರದಿಂದಲೇ ಇಡೀ ಹಾನಗಲ್ಲಿನ ಮನೆ ಮನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿ ಬರಗಾಲ ಬಂದಿದೆ. ನೀರು ಹಿತ ಮಿತ ಬಳಸಿ, ಚುನಾವಣೆ ಬಂದಿದೆ ತಪ್ಪದೇ ಮತದಾನ ಮಾಡಿ ಎಂಬ ಸಂದೇಶ ಸಾರುತ್ತಿರುವುದು ವಿಶೇಷವಾಗಿದೆ. ಭಾನುವಾರ ಮಧ್ಯಾಹ್ನದವರೆಗೆ ಈ ವೇಷಭೂಷಣ ಇರಲಿದ್ದು, ಕಾಮನನ್ನು ಸುಡುವ ಮೂಲಕ ಓಕಳಿ ಹಾಗೂ ವೇಷಭೂಷಣಕ್ಕೆ ತೆರೆ ಬೀಳಲಿದೆ.

ಚಿಕ್ಕಂದಿನಿಂದಲೂ ವೇಷಭೂಷಣ ಹಾಕುವ ಖಯಾಲಿ ನನ್ನದು. ಓಕಳಿ ಸಂದರ್ಭದಲ್ಲಿ ಒಂದೊಂದು ವಿಶೇಷ ವೇಷ ಧರಿಸಿ ಆಯಾ ಸಮಯಕ್ಕೆ ಬೇಕಾದ ಸಂದೇಶ ಹೇಳುತ್ತ ತಿರುಗಾಡುವುದು ಒಂದು ಜಾಗೃತಿಯಾದರೆ, ಇನ್ನೊಂದು ವೇಷ ಹಾಕುವ ಹಂಬಲ ಪೂರೈಸಿಕೊಳ್ಳುವುದು. ಪ್ರತಿ ಬಾರಿ ಮುಂದಿನ ವರ್ಷ ಯಾವ ವೇಷ ಎಂದು ಕೇಳುತ್ತಾರೆ. ಕಾಮನಹಬ್ಬ ಸಮೀಪಿಸಿದಾಗ ಈ ವರ್ಷ ಯಾವ ವೇಷ ಎಂದು ಹುಡುಗರು, ಹಿರಿಯರು ಕೇಳುತ್ತಾರೆ. ಇದರಲ್ಲಿ ಖುಷಿ ಇದೆ ಎಂದು ಜನಪದ ಕಲಾವಿದ ರವಿ ಲಕ್ಷ್ಮೇಶ್ವರ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!