ಕನ್ನಡಪ್ರಭ ವಾರ್ತೆ ವಿಜಯಪುರ
ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಅರಣ್ಯೀಕರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಕನಸಿನ ವೃಕ್ಷೋಥಾನ್ ಹೆರಿಟೇಜ್ ರನ್ ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.ವೃಕ್ಷೋಥಾನ್ ಹೆರಿಟೇಜ್ ರನ್-2023ರ ಅಂಗವಾಗಿ ಮಂಗಳವಾರ ನಗರದ ಐತಿಹಾಸಿಕ ಗಗನ ಮಹಲ್ ನಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲೆಗಳ ಬಾಲಕ ಮತ್ತು ಬಾಲಕಿಯರಿಗಾಗಿ ಆಯೋಜಿಸಿದ್ದ ಐತಿಹಾಸಿಕ ಸ್ಮಾರಕಗಳ ಹಾಗೂ ಪರಿಸರ ರಕ್ಷಣೆ ಕುರಿತು ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಗೋಳಗುಮ್ಮಟ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸ್ಮಾರಕಗಳು, ದೇವಾಲಯಗಳು, ಜೈನ ಬಸದಿಗಳಿವೆ. ಮುಂದಿನ ಪೀಳಿಗೆಗಾಗಿ ಇವುಗಳನ್ನು ಪೋಷಿಸಿ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಅರಣ್ಯೀಕರಣದ ಕೊರತೆ ಇರುವ ಹಿನ್ನೆಲೆಯಲ್ಲಿ ಸಚಿವ ಎಂ.ಬಿ. ಪಾಟೀಲ ಅವರು ಕೋಟಿ ವೃಕ್ಷ ಅಭಿಯಾನ ಅಂಗವಾಗಿ ಈಗಾಗಲೇ ಮರಗಳನ್ನು ಬೆಳೆಸಿದ್ದಾರೆ. ಈ ಅಭಿಯಾನದ ಮುಂದುವರಿದ ಭಾಗವಾಗಿ ಈಗ ವೃಕ್ಷೊಥಾನ್ ಹೆರಿಟೇಜ್ ರನ್ ನಡೆಯುತ್ತಿದೆ. ಸಚಿವರ ಕನಸಿನ ಈ ಯೋಜನೆ ನನಸು ಮಾಡಲು ನಾವೆಲ್ಲರೂ ಕಾಡನ್ನು ಬೆಳೆಸೋಣ ಎಂದು ಅವರು ಹೇಳಿದರು.ಹೆರಿಟೇಜ್ ರನ್ ಸುಮಾರು 10 ಸಾವಿರ ಓಟಗಾರರು ಭಾಗವಹಿಸುತ್ತಿದ್ದು, ತಾವೆಲ್ಲರೂ ಪರಿಸರ ಕಾಪಾಡುವಲ್ಲಿ ಓರ್ವ ರಾಯಭಾರಿಯಾಗಿ ಪ್ರಕೃತಿ ಸಂರಕ್ಷಿಸಬೇಕು. ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸಬೇಕು ಎಂದು ಅವರು ಹೇಳಿದರು.
ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಡಾ.ಮುರುಗೇಶ ಪಟ್ಟಣಶಟ್ಟಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಎನ್.ಎಚ್. ನಾಗೂರ, ಎಂ.ಪಿ. ಕುಪ್ಪಿ, ನೂಡೆಲ್ ಅಧಿಕಾರಿ ಅಂಬಣ್ಣ ಲಾಳಸೇರಿ ಇತರರು ಉಪಸ್ಥಿತರಿದ್ದರು. ಪಠ್ಯಪುಸ್ತಕ ಪರಿಷ್ಕರಣೆ ಸಂಪನ್ಮೂಲ ವ್ಯಕ್ತಿ ಮಂಜುನಾಥ ಮಾನೆ, ಆನಂದ ಝಂಡೆ, ರಮೇಶ ಚವ್ಹಾಣ, ಬಿ. ಎಸ್. ಪಾಟೀಲ, ಭಜಂತ್ರಿ, ರಾಜಕುಮಾರ ವಾಲಿಕಾರ, ಎಂ.ಕೆ. ಗಾಡಿವಡ್ಡರ, ಬಂದೆನವಾಜ್, ಎಸ್.ಸಿ. ಹೂಗಾರ, ಶಿವಣ್ಣವರ, ಚಿತ್ರಕಲಾ ಶಿಕ್ಷಕರು ಹಾಗೂ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ 50ಕ್ಕೂ ಬಾಲಕ ಮತ್ತು ಬಾಲಕಿಯರು ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಹುಮಾಯೂನ ಎ.ಮಮದಾಪೂರ ನಿರೂಪಿಸಿದರು.