10 ಕಡೆ ವೃಕ್ಷೋದ್ಯಾನ ನಿರ್ಮಾಣಕ್ಕೆ ಯೋಜನೆ

KannadaprabhaNewsNetwork |  
Published : Nov 24, 2026, 02:30 AM IST
ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಹಸಿರು ಹೆಚ್ಚಿಸುವ ಉದ್ದೇಶದೊಂದಿಗೆ ಹೊಸ ಯೋಜನೆ ರೂಪಿಸಿರುವ ಅರಣ್ಯ ಇಲಾಖೆ, ನಗರದ 10 ಕಡೆ ಬೃಹತ್‌ ವೃಕ್ಷೋದ್ಯಾನ ನಿರ್ಮಾಣಕ್ಕೆ ಮುಂದಾಗಿದೆ.

-ಹಸಿರು ಪರಿಸರ ಹೆಚ್ಚಿಸಲು ಅರಣ್ಯ ಇಲಾಖೆ ನಿರ್ದಾರ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನಲ್ಲಿ ಹಸಿರು ಹೆಚ್ಚಿಸುವ ಉದ್ದೇಶದೊಂದಿಗೆ ಹೊಸ ಯೋಜನೆ ರೂಪಿಸಿರುವ ಅರಣ್ಯ ಇಲಾಖೆ, ನಗರದ 10 ಕಡೆ ಬೃಹತ್‌ ವೃಕ್ಷೋದ್ಯಾನ ನಿರ್ಮಾಣಕ್ಕೆ ಮುಂದಾಗಿದೆ.

ಅರಣ್ಯ ಇಲಾಖೆ ಮಾಹಿತಿಯಂತೆ ಬೆಂಗಳೂರು ನಗರದಲ್ಲಿ ಶೇ. 12.95ರಷ್ಟು ಅರಣ್ಯ ಹೊದಿಕೆಯಿದೆ. ಅಲ್ಲದೆ, 2025-26ರಿಂದ 2034-36ರ ವೇಳೆಗ ಹಾಲಿ ಇರುವ 4417.05 ಹೆಕ್ಟೇರ್‌ ಅಧಿಸೂಚಿತ ಅರಣ್ಯವೂ ಸೇರಿದಂತೆ 6527.60 ಹೆಕ್ಟೇರ್‌ ವಿಸ್ತೀರ್ಣಕ್ಕೆ ಹೆಚ್ಚಿಸುವ ಗುರಿಯನ್ನು ಅರಣ್ಯ ಇಲಾಖೆ ನಿಗದಿ ಮಾಡಿದೆ. ಅದರ ಭಾಗವಾಗಿಯೇ ನಗರದಲ್ಲಿ 10 ಕಡೆ 3271 ಎಕರೆ (1323.90 ಹೆಕ್ಟೇರ್‌) ವಿಸ್ತೀರ್ಣದಲ್ಲಿ ಬೃಹತ್‌ ವೃಕ್ಷೋದ್ಯಾನ ನಿರ್ಮಾಣಕ್ಕೆ ಇಲಾಖೆ ಯೋಜಿಸಿದೆ.

ಅರಣ್ಯ ಭೂಮಿ ಒತ್ತುವರಿಯಾಗಿರುವ ಕಡೆಗಳಲ್ಲಿ ಅದನ್ನು ತೆರವು ಮಾಡಿ ಮತ್ತು ಅರಣ್ಯ ಭೂಮಿ ಕಡಿಮೆಯಾಗುತ್ತಿರುವ ಪ್ರದೇಶವನ್ನು ಗುರುತಿಸಿ ವೃಕ್ಷೋದ್ಯಾನ ನಿರ್ಮಿಸಲಾಗುತ್ತಿದೆ. ಅದರಲ್ಲಿ ಮಾದಪ್ಪನಹಳ್ಳಿಯ ವಿಶ್ವಗುರು ಬಸವಣ್ಣ ಬೃಹತ್‌ ವೃಕ್ಷೋದ್ಯಾನ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆಗೊಂಡಿದ್ದು, ನಿರ್ಮಾಣ ಕಾರ್ಯವೂ ಆರಂಭವಾಗಿದೆ. ಉಳಿದ 9 ವೃಕ್ಷೋದ್ಯಾನ ನಿರ್ಮಾಣಕ್ಕೆ ಅನುಮೋದನೆ ಕೋರಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಲಾಗುತ್ತಿದೆ.

1303 ಎಕರೆಯಲ್ಲಿ ಮಾತ್ರ ಸಾರ್ವಜನಿಕರ ಪ್ರವೇಶ:

ಅರಣ್ಯ ಇಲಾಖೆ ಯೋಜಿಸಿರುವಂತೆ 3271 ಎಕರೆ ಅರಣ್ಯ ಪ್ರದೇಶದಲ್ಲಿ ವೃಕ್ಷೋದ್ಯಾನ ನಿರ್ಮಿಸಲಾಗುತ್ತಿದೆ. ಅದರಲ್ಲಿ 1303 ಎಕರೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುತ್ತಿದೆ. ಅದರಲ್ಲಿ ವಾಕಿಂಗ್‌ ಪಥ, ಸೈಕಲ್‌ ಪಥ ಸೇರಿದಂತೆ ಮತ್ತಿತರ ಸೌಕರ್ಯವನ್ನು ಕಲ್ಪಿಸಲಾಗುತ್ತದೆ. ಉಳಿದ 1968 ಎಕರೆ ವೃಕ್ಷೋದ್ಯಾನದಲ್ಲಿ ವಿವಿಧ ಪ್ರಭೇದದ ಸಸ್ಯಗಳನ್ನು ಬೆಳೆಸಲಾಗುತ್ತದೆ ಮತ್ತು ವನ್ಯಜೀವಿಗಳಿಗೆ ಅನುಕೂಲವಾಗುವತಹ ಪರಿಸರವನ್ನು ನಿರ್ಮಿಸಲಾಗುತ್ತದೆ. ಹಾಗೆಯೇ, ಚೆಕ್‌ಡ್ಯಾಂಗಳು, ನರ್ಸರಿ ಸೇರಿದಂತೆ ಇನ್ನಿತರ ಅಂಶಗಳು ಇರಲಿವೆ. ಈ 10 ವೃಕ್ಷೋದ್ಯಾನ ನಿರ್ಮಾಣಕ್ಕೆ 222.99 ಕೋಟಿ ರು. ವೆಚ್ಚವಾಗಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಹಾಲಿ ಇರುವ ವೃಕ್ಷೋದ್ಯಾನಗಳು:

ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಹಾಲಿ 9 ಕಡೆಗಳಲ್ಲಿ ವೃಕ್ಷೋದ್ಯಾನಗಳಿವೆ. ಕಾಡುಗೋಡಿ, ಪಣತ್ತೂರು, ಕೊತ್ತನೂರು, ಹೆಣ್ಣೂರು, ಜಾರಕಬಂಡೆ, ಮಾಚೋಹಳ್ಳಿ, ತುರಹಳ್ಳಿ, ಯುಎಂ ಕಾವಲ್‌ ಮತ್ತು ಸುಲಿಕೆರೆಯಲ್ಲಿ ಒಟ್ಟು 418.34 ಎಕರೆ ವಿಸ್ತೀರ್ಣದಲ್ಲಿ ವೃಕ್ಷೋದ್ಯಾನ ನಿರ್ಮಾಣವಾಗಿದೆ. ಅದರ ಜತೆಗೆ ಇದೀಗ ಹೊಸದಾಗಿ 3271 ಎಕರೆ ವಿಸ್ತೀರ್ಣದ ವೃಕ್ಷೋದ್ಯಾನಗಳನ್ನು ನಿರ್ಮಿಸಲಾಗುತ್ತಿದೆ.

ವೃಕ್ಷೋದ್ಯಾನ ನಿರ್ಮಿಸಲಾಗುತ್ತಿರುವ ಸ್ಥಳಗಳು:

ತುರಹಳ್ಳಿ ಮೀಸಲು ಅರಣ್ಯ ಪ್ರದೇಶ, ತುರಹಳ್ಳಿ ಕಿರು ಅರಣ್ಯ ಪ್ರದೇಶ, ಕಲ್ಕೆರೆ ಅರಣ್ಯ ಪರಿಸರ ಕೇಂದ್ರ, ದೊರೆಸಾನಿಪಾಳ್ಯ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಪಾಣತ್ತೂರು ನಗರವನ ಜೀವವೈವಿಧ್ಯ ಉದ್ಯಾನ, ಮಾರಸಂದ್ರ ಜೀವವೈವಿಧ್ಯ ಉದ್ಯಾನ, ಮಂಡೂರು, ಜರಕಬಂಡೆ ನಗರವನ, ವೃಕ್ಷ ಕೃಷಿ ಕೇಂದ್ರ (ಜಾರಕಬಂಡೆ ಮೀಸಲು ಅರಣ್ಯ), ವಿಶ್ವಗುರು ಬಸವಣ್ಣ ಬೃಹತ್‌ ಜೀವವೈವಿಧ್ಯ ಉದ್ಯಾನ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.18-20ರವರೆಗೆ ಮುಂಬೈನಲ್ಲಿ ವಿಶ್ವಹಿಂದು ಕಾಂಗ್ರೆಸ್‌ ಆಯೋಜನೆ: ಸ್ವಾಮಿ
ಕೋರ್ಟ್‌ನಲ್ಲಿ ವಕೀಲರ ಗದ್ದಲ ಕೇಸ್‌ ಮುಕ್ತಾಯ