ಕನ್ನಡಪ್ರಭ ವಾರ್ತೆ ತಾಂಬಾ
ಬಂಥನಾಳ ಮಠದಲ್ಲಿ ವೃಷಭಲಿಂಗೇಶ್ವರ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಶನಿವಾರ ಅಗ್ನಿ ಪ್ರವೇಶ ಕಾರ್ಯಕ್ರಮ ಸಹಸ್ರಾರು ಭಕ್ತರ ಜಯಘೋಷ, ಸಂಭ್ರಮದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಮಠದಲ್ಲಿ ಉತ್ಸವದ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಧಾರ್ಮಿಕ ಕಾರ್ಯಕ್ರಮ ನಡೆದವು.ಬಂಥನಾಳದ ವೃಷಭಲಿಂಗೇಶ್ವರ ಪಲ್ಲಕ್ಕಿ ಹಾಗೂ ರೆಬಿನಾಳ ಬಸವೇಶ್ವರ ಪಲ್ಲಕ್ಕಿ ಆಗಮನ ಸಾಂಪ್ರದಾಯಿಕವಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗದ ವೀರಗಾಸೆ ಕಲಾವಿದರು, ಭಜನಾ ಕಲಾವಿದರು ಭಾಗವಹಿಸಿ ಕಲೆಯನ್ನು ಪ್ರದರ್ಶಿಸಿ ಭಕ್ತರದಲ್ಲಿ ಭಕ್ತಿಭಾವ ಮೂಡಿಸಿದರು.
ಈ ವೇಳೆ ಅಗ್ನಿ ಪ್ರವೇಶ ಕಾರ್ಯಕ್ರಮ ಬಂಥನಾಳ ಮಠದ ಪೀಠಾಧೀಶ ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಸಂಪ್ರದಾಯಬದ್ದವಾಗಿ ನೆರವೇರಿತು. ಪಲ್ಲಕ್ಕಿ ಅಗ್ನಿ ಕೊಂಡ ಹಾಯುವ ವೇಳೆ ಭಕ್ತರ ಜಯ ಘೋಷ ಮುಗಿಲು ಮುಟ್ಟಿದ್ದವು. ಈ ವೇಳೆ ಹಲವು ವೀರಗಾಸೆ ಕಲಾವಿದರು, ಹರಕೆ ಹೊತ್ತ ಭಕ್ತರು ಅಗ್ಗಿ ಹಾಯ್ದುಭಕ್ತಿ ಭಾವ ಸಮರ್ಪಿಸಿದರು. ಅಗ್ಗಿ ಕಟ್ಟೆಯ ಸುತ್ತಲೂ, ಕಟ್ಟಡದ ಮೇಲೆ ಕಿಕ್ಕಿರಿದ ಜನರು ಅಗ್ನಿ ಪ್ರವೇಶದ ದೃಶ್ಯವನ್ನು ಕಣ್ತುಂಬಿಕೊಂಡರು. ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಇದಲ್ಲದೆ ತಡವಲಗಾ ಗ್ರಾಮದ ಅಭಿನವ ರಾಚೋಟೇಶ್ವರ ಶಿವಾಚಾರ್ಯರಿಂದ ದೀಕ್ಷಾ ಸಮಾರಂಭ ಕೂಡ ನೆರವೇರಿತು. ಬಳಿಕ ಬಂದ ಭಕ್ತರು ದೇವರಿಗೆ ಕಾಯಿ, ಕರ್ಪೂರ, ಹೂ, ಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದರು.ಜಾತ್ರೋತ್ಸವದ ಅಂಗವಾಗಿ ಮಠಕ್ಕೆ ಬಂದ ಭಕ್ತರಿಗೆ ನಿರಂತರ ದಾಸೋಹ ಕೇಂದ್ರದಲ್ಲಿ ಬೃಹತ್ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ನಾಡಿನ ನಾನಾ ಭಾಗದ ಸಹಸ್ರಾರು ಭಕ್ತರು ಸಜ್ಜಕ, ಅನ್ನ ಪ್ರಸಾದ ಸ್ವಿಕರಿಸಿ ಧನ್ಯತೆ ಮೆರದರು. ಈ ದಾಸೋಹ ಕೇಂದ್ರದಲ್ಲಿ ತಾಂಬಾ ಗ್ರಾಮದ ಸಂಗನಬಸವೇಶ್ವರ ಪ್ರೌಢ ಶಾಲೆ, ಐಟಿಐ ಕಾಲೇಜಿನ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಹಲವು ಭಕ್ತರು ಸ್ವಯಂಸೇವೆ ಸಲ್ಲಿಸಿದರು. ನಂತರ ಹಲವು ಭಕ್ತರು ಮಠದಲ್ಲಿ ನಾಡಿನ ನಾನಾ ಭಾಗದ ಭಜನಾ ಕಲಾವಿದರು ಭಜನಾ ಕಲೆ ಪ್ರದರ್ಶಿಸಿದರು.
ಈ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರನ್ನು ಕರೆತರಲು ತಾಂಬಾ ಗ್ರಾಮದ ೬೦ ರಿಂದ ೭೦ ಟಂ ಟಂ, ಟೆಂಪೋ, ಕ್ರೋಸರ್ ಸೇರಿದಂತೆ ವಿವಿಧ ವಾಹನ ಸವಾರರು ತಾಂಬಾದಿಂದ ಬಂಥನಾಳದವರೆಗೆ ಭಕ್ತರಿಗೆ ಉಚಿತ ಸೇವೆ ಒದಗಿಸಿ ಭಕ್ತಿ ಸಲ್ಲಿಸಿದರು. ಈ ಉತ್ಸವದಲ್ಲಿ ಸುರಗಿಹಳ್ಳಿ,ಚಾಂದಕವಠೆ, ಚಟ್ಟರಕಿ, ಬಳಗಾನೂರ, ಕೊರಳ್ಳಿ, ಚಿಕ್ಕರೂಗಿ, ಗಂಗನಳ್ಳಿ, ಹಿಟ್ಟಳ್ಳಿ, ಲಚ್ಯಾಣ, ದೇವರಹಿಪ್ಪರಗಿ, ಸಾತಿಹಾಳ, ಪಡನೂರ, ಮಸಬಿನಾಳ, ಡೋಣುರ, ಕನ್ನೊಳ್ಳಿ, ಬೋಳೆಗಾಂವ ಸೇರಿದಂತೆ ಜಿಲ್ಲೆಯ ಹಾಗೂ ಮಹಾರಾಷ್ಟ್ರದ ವಿವಿಧ ಭಾಗದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.