ರೈತರ ಪಹಣಿಯಲ್ಲಿ ವಕ್ಫ್ ಹೆಸರು
ಪಹಣಿ ಪಡೆದ ಮೇಲೆಯೇ ಗೊತ್ತಾಗಿದೆ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಅಚ್ಚರಿ ಎಂದರೆ ಇವರ್‍ಯಾರಿಗೂ ನೋಟಿಸ್ ಸಹ ಕಳುಹಿಸಿಲ್ಲ. ಆದರೆ, 2023ರ ಮಾರ್ಚ್ ತಿಂಗಳಲ್ಲಿಯೇ ಇವರ ಪಹಣಿಯಲ್ಲಿ ವಕ್ಫ್ ಹೆಸರು ದಿಢೀರ್ ಪ್ರತ್ಯಕ್ಷವಾಗಿದ್ದು, ಹಲವರನ್ನು ಆತಂಕಕ್ಕೆ ದೂಡಿದೆ.
ಹೂವಿನಾಳ ಬಳಿ ಇರುವ ಆದಿತ್ಯ ಪಟವಗಾಂವಕರ ಅವರ ಹೆಸರಿನಲ್ಲಿ ಇರುವ 33 ಗುಂಟೆ ಜಮೀನು ಈಗ ಕೋಟ್ಯಂತರ ರುಪಾಯಿ ಬೆಲೆ ಬಾಳುತ್ತದೆ. ಈಗ ದಿಢೀರ್ ಎಂದು ಇವರ ಪಹಣಿಯಲ್ಲಿ ವಕ್ಫ್ ಹೆಸರು ಪ್ರತ್ಯಕ್ಷವಾಗಿದೆ. ಈ ಬಗ್ಗೆ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ. ಆದರೆ, ಅವರು ಪಹಣಿ ಪಡೆದ ಮೇಲೆಯೇ ಗೊತ್ತಾಗಿದೆ. ಈ ಹಿಂದೆ ಯಾವ ವರ್ಷದ ಪಹಣಿಯಲ್ಲಿಯೂ ವಕ್ಫ್ ಹೆಸರು ಇರಲಿಲ್ಲ.
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಯಾರು ಸಹ ಮಾಹಿತಿ ನೀಡುತ್ತಿಲ್ಲ. ಕಂದಾಯ, ನೋಂದಣಿ ಇಲಾಖೆಗೂ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದಾರೆ. ಆಗಲೂ ಈ ಬಗ್ಗೆ ಮಾಹಿತಿ ನೀಡಿಲ್ಲ. ಖುದ್ದು ವಕ್ಫ್ ಮಂಡಳಿಗೂ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದರೆ ಅವರು ಮಾಹಿತಿ ನೀಡಿಲ್ಲ.
ಕೊಪ್ಪಳ ಜಿಲ್ಲೆಯಲ್ಲಿ ವಕ್ಫ್ ಆಸ್ತಿ 3305 ಎಕರೆ ವಿವಾದದಲ್ಲಿ ಇದೆ. ಇಷ್ಟು ಭೂಮಿ ವೈಯಕ್ತಿಕ ಹೆಸರಿನಲ್ಲಿದ್ದು, ಇದು ವಕ್ಫ್ ಆಸ್ತಿ ಎನ್ನುವುದು ವಕ್ಫ್ ಮಂಡಳಿಯ ವಾದ.
49 ಪ್ರಕರಣದ ವಿವಾದದಲ್ಲಿ 11 ಪ್ರಕರಣಗಳ ಕುರಿತು ಸರ್ಕಾರದ ಆದೇಶವಾಗಿದೆ. 38 ಪ್ರಕರಣಗಳು ವಿಚಾರಣೆ ಬಾಕಿ ಇವೆ. ಕೊಪ್ಪಳ ಜಿಲ್ಲೆಯಲ್ಲಿ 1083 ವಕ್ಫ್ ಆಸ್ತಿಗಳಿಗೆ ಬೇಲಿ ಹಾಕಲಾಗಿದೆ. 502 ವಕ್ಫ್ ಆಸ್ತಿಗಳಿಗೆ ಬೇಲಿ ಹಾಕಬೇಕಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ 3475.10 ಎಕರೆ ಭೂಮಿ ವಕ್ಫ್ ಆಸ್ತಿಯಾಗಿದೆ. ಆದರೆ, ವಾಸ್ತವದಲ್ಲಿ ಇದು ಕೇವಲ 169.19 ಗುಂಟೆ ಮಾತ್ರ ಇದೆ. ವೈಯಕ್ತಿಕ ಹೆಸರಿನಲ್ಲಿ 3305-31 ಗುಂಟೆ ಭೂಮಿ ಬೇರೆಯವರ ಹೆಸರಿನಲ್ಲಿ ಇದೆ. ಇದುವೇ ಈಗ ವಿವಾದದ ಕೇಂದ್ರವಾಗಿದ್ದು, ಇದನ್ನು ಮರಳಿ ಪಡೆಯಲು ವಕ್ಫ್ ಸಮಿತಿ ಮುಂದಾಗಿದೆ.