ಗದಗ ತಾಲೂಕಿನ ನರಸಾಪುರ ಗ್ರಾಮದ ನಾಲತವಾಡ ವೀರೇಶ್ವರ ಶರಣರ ಮಠದಲ್ಲಿ ವೀರೇಶ್ವರ ಶರಣರ ಜಯಂತ್ಯುತ್ಸವ, ಮಹಾರಥೋತ್ಸವ ಹಾಗೂ ಚಂದ್ರಶೇಖರ ಶರಣರ 12ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಧರ್ಮಸಭೆ ನಡೆಯಿತು.
ಗದಗ: ಆಧುನಿಕ ದಿನಮಾನವು ಎಐ ತಂತ್ರಜ್ಞಾನದತ್ತ ಹೊರಳುತ್ತಿದೆ. ಪ್ರತಿಯೊಬ್ಬರೂ ಒತ್ತಡದ ಬದುಕಿನಲ್ಲಿ ಬದುಕುವಂತಾಗಿದ್ದು, ಸಮಯ ಸಿಕ್ಕಾಗೆಲ್ಲ ಶಿವಧ್ಯಾನ, ಪ್ರಾರ್ಥನೆ ಹಾಗೂ ಭಕ್ತಿ ಮಾರ್ಗದಲ್ಲಿ ನಡೆಯುವ ಮೂಲಕ ಸಂತೃಪ್ತಿ ಜೀವನ ನಡೆಸಬೇಕು ಎಂದು ಶಿವಕುಮಾರ ಶರಣರು ಹೇಳಿದರು.ತಾಲೂಕಿನ ನರಸಾಪುರ ಗ್ರಾಮದ ನಾಲತವಾಡ ವೀರೇಶ್ವರ ಶರಣರ ಮಠದಲ್ಲಿ ವೀರೇಶ್ವರ ಶರಣರ ಜಯಂತ್ಯುತ್ಸವ, ಮಹಾರಥೋತ್ಸವ ಹಾಗೂ ಚಂದ್ರಶೇಖರ ಶರಣರ 12ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಈಗ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದೆ. ಅವಶ್ಯಕತೆಗನುಸಾರವಾಗಿ ಮೊಬೈಲ್ ಬಳಸಬೇಕು. ಆದರೆ, ಅಡುಗೆ, ಊಟ ಹಾಗೂ ವ್ಯವಹಾರ ಮಾಡುವಾಗಲೂ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮಾಡುವ ಕಾರ್ಯಗಳೂ ಅರ್ಥಹೀನಗೊಳ್ಳುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಪಂಚಾಕ್ಷರಿ ಮಂತ್ರ ಜಪಿಸುತ್ತ ಶ್ರೇಷ್ಠ ಭಾವನೆಯಿಂದ ಅಡುಗೆ ಮಾಡಿ ಊಟ ಮಾಡಿದಾಗ ಪ್ರಸಾದ ಸೇವಿಸಿದ ಅನುಭವವಾಗುತ್ತದೆ. ಮಾಡಿದ ಕೆಲಸಗಳೂ ಸಾರ್ಥಕಗೊಳ್ಳುತ್ತವೆ ಎಂದರು.
ವೀರೇಶ್ವರ ಶರಣರು ತಮ್ಮ ಕಾಯಕದ ಮೂಲಕ ಬಂದ ಹಣವನ್ನು ದಾಸೋಹ ನಡೆಸುತ್ತಿದ್ದರು. ಆನಂತರ ವೀರೇಶ್ವರ ಶರಣರ ಪ್ರೇರಣೆಯಿಂದ ಚಂದ್ರಶೇಖರ ಶರಣರು ನರಸಾಪುರ ಗ್ರಾಮದಲ್ಲಿ 1974ರಲ್ಲಿ ವೀರೇಶ್ವರ ಶರಣರ ಮಠವನ್ನು ಸ್ಥಾಪಿಸಿ ನಿತ್ಯ ಪೂಜಾ ಕೈಂಕರ್ಯಗಳನ್ನು ನಡೆಸುತ್ತ, ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತ ಶ್ರೀಮಠವನ್ನು ಮುನ್ನಡೆಸಿಕೊಂಡು ಬಂದರು. ಶ್ರೀಮಠದಲ್ಲಿ ಪ್ರತಿವರ್ಷ ವೀರೇಶ್ವರ ಶರಣರ ಜಯಂತ್ಯುತ್ಸವ ಹಾಗೂ ಚಂದ್ರಶೇಖರ ಶರಣರ ಪುಣ್ಯಸ್ಮರಣೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ಅಡ್ನೂರು ದಾಸೋಹ ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರೇಶ್ವರ ಶರಣರು ಪ್ರತಿನಿತ್ಯ ಕೇವಲ ಐದು ಮನೆಗೆ ಭಿಕ್ಷೆಗೆ ಹೋಗುತ್ತಿದ್ದರು. ಭಿಕ್ಷೆಯಲ್ಲಿ ಬಂದ ಕಾಳು ಕಡಿಗಳನ್ನು ಮೊದಲು ಜಂಗಮರಿಗೆ ಪ್ರಸಾದ ವಿತರಿಸಿ ಉಳಿದರೆ ಸ್ವೀಕರಿಸುತ್ತಿದ್ದರು, ಇಲ್ಲವಾದಲ್ಲಿ ಉಪವಾಸವಿರುತ್ತಿದ್ದರು. ಅಂತಹ ಮಹಾಮಹಿಮ ಶರಣರ ಜಯಂತ್ಯುತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಧರ್ಮಸಭೆಗೂ ಮುನ್ನ ಬೆಳಗ್ಗೆ ಷಟ್‌ಸ್ಥಲ ಧ್ವಜಾರೋಹಣ, ವೀರೇಶ್ವರ ಶರಣರ ಹಾಗೂ ಚಂದ್ರಶೇಖರ ಶರಣರ ಮೂರ್ತಿಗಳಿಗೆ ಮಹಾರುದ್ರಾಭಿಷೇಕ, ಆನಂತರ ಚಂದ್ರಶೇಖರ ಶರಣರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರುಗಿತು. ಆನಂತರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ನೂರಾರು ಭಕ್ತರು ಪಾಲ್ಗೊಂಡರು.ಕಳಕಮಲ್ಲಯ್ಯ ಹಿರೇಮಠ, ಕೆ.ಎಸ್. ಹಿರೇಮಠ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.