ಭೋವಿ ಜನಾಂಗಕ್ಕಾದ ಅನ್ಯಾಯ ಖಂಡಿಸಿ ಪಾದಯಾತ್ರೆ

KannadaprabhaNewsNetwork | Published : Dec 14, 2024 12:47 AM

ಸಾರಾಂಶ

ಜಾತಿ ಪ್ರಮಾಣ ನೀಡಲು ಸಂಬಂಧಿಸಿದ ತಹಸೀಲ್ದಾರ್‌ರು ಸರ್ಕಾರಕ್ಕೆ ಕಾಲ, ಕಾಲಕ್ಕೆ ಹೊರಡಿಸಿರುವ ಆದೇಶಗಳನ್ನು ಪರಿಗಣಿಸದೆ ಭೋವಿ ಸಮಾಜದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಸರ್ಕಾರಿ ಉದ್ಯೋಗ ಬಯಸಿ ನೇಮಕವಾದವರಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ನಿರಾಕರಿಸುತ್ತಿದ್ದಾರೆ.

ಧಾರವಾಡ:

ಮೂಲತಃ ಅಂಬಿಗ, ಬೆಸ್ತ ಹಾಗೂ ವಡ್ಡರಲ್ಲದ ಪಲ್ಲಕ್ಕಿ ಹೊರುವ ಮೂಲ ಭೋವಿ ಜನಾಂಗಕ್ಕೆ ಭೋವಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಸಮಾಜದ ಜನರು ಧಾರವಾಡದಲ್ಲಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಜಾತಿ ಪ್ರಮಾಣ ನೀಡಲು ಸಂಬಂಧಿಸಿದ ತಹಸೀಲ್ದಾರ್‌ರು ಸರ್ಕಾರಕ್ಕೆ ಕಾಲ, ಕಾಲಕ್ಕೆ ಹೊರಡಿಸಿರುವ ಆದೇಶಗಳನ್ನು ಪರಿಗಣಿಸದೆ ಭೋವಿ ಸಮಾಜದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಸರ್ಕಾರಿ ಉದ್ಯೋಗ ಬಯಸಿ ನೇಮಕವಾದವರಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ನಿರಾಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂವಿಧಾನಬದ್ಧ ಸೌಲಭ್ಯ ಪಡೆಯಲು, ಅಧಿಕಾರಿಗಳಿಂದಾಗುತ್ತಿರುವ ತೊಂದರೆ ನಿವಾರಿಸುವುದು ಸೇರಿದಂತೆ ಸಮಾಜದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಪ್ರಾಂತಗಳ ಜಿಲ್ಲೆಗಳಿಂದ ನವಲಗುಂದದಿಂದ ಪಾದಯಾತ್ರೆ ಆರಂಭಿಸಿದ್ದು, ಬೆಳಗಾವಿಯ ಸುವರ್ಣಸೌಧ ತಲುಪಿ ಸುವರ್ಣಸೌಧದ ಎದುರಿಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಭೋವಿ ಜಾತಿಯವರಿಗೆ ಎಸ್ಸಿ ಪ್ರಮಾಣ ಪತ್ರ ನೀಡುವಾಗ ಕೇವಲ ಭೋವಿ ಎಂದು ಪರಿಗಣಿಸಬೇಕು ಹೊರತು ಸಮಾನಾಂತರ ಜಾತಿಗಳನ್ನು ಪರಿಗಣಿಸಬಾರದು. ಸರ್ಕಾರ ರಚಿಸಿರುವ ಭೋವಿ ನಿಗಮದ ಹೆಸರನ್ನು ಅನ್ಯ ಜಾತಿ ಹೆಸರಿನಲ್ಲಿ ಪರಿಗಣಿಸದೇ ಭೋವಿ ಜಾತಿ ಹೆಸರಿನಲ್ಲಿ ಮುಂದುವರಿಸುವುದು, ಭೋವಿ ಜಾತಿಗೆ ಸಂಬಂಧವಿರದ ಭೋವಿ ಹೊರತಾಗಿ ಸಮಾನಾಂತರ ಪದಗಳನ್ನು ಮೂಲ ಭೋವಿ ಜಾತಿಯಿಂದ ಹೊರಗಿಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

ಸಮಾಜದ ಅಧ್ಯಕ್ಷ ಲಕ್ಮಣ ಭೋವಿ ಅಧ್ಯಕ್ಷತೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ಹುಚ್ಚಪ್ಪ ಭೋವಿ, ವಿಠಲ ಭೋವಿ, ಯಲ್ಲಪ್ಪ ಭೋವಿ, ಹುಲಿಗಪ್ಪ ಭೋವಿ, ಕೃಷ್ಣ ಭೋವಿ, ನಾಗಪ್ಪ ಭೋವಿ, ಬೇಲೂರಪ್ಪ ಭೋವಿ, ಮುತ್ತಪ್ಪ ಜಾಲಿಹಾಲ, ಶಂಕರಪ್ಪ ಭೋವಿ, ಸುರೇಶ ಭೋವಿ, ಪುಂಡಲೀಕ ಭೋವಿ ಮತ್ತಿತರರು ಇದ್ದರು.

Share this article