ಹೊಲಕ್ಕಿಳಿದು ತಂತ್ರಜ್ಞಾನ ಕಲಿಸುತ್ತಿರುವ ವಾಲ್ಮಿ!

KannadaprabhaNewsNetwork |  
Published : Sep 27, 2026, 02:00 AM IST
ಧಾರವಾಡ ಕೃಷಿ ಮೇಳದಲ್ಲಿ ವಾಲ್ಮಿ ಸಂಸ್ಥೆಯಿಂದ ರೈತರಲ್ಲಿ ಜಾಗೃತಿ ಮೂಡಿಸಲು ಹಾಕಲಾಗಿರುವ ಮಳಿಗೆ. | Kannada Prabha

ಸಾರಾಂಶ

ತರಗತಿಯಲ್ಲಿ ಹೇಳಿದ ಮಾತು ಹೊಲದಲ್ಲಿ ಅಳವಡಿಕೆಯಾಗಬೇಕಾದರೆ, ಮೊದಲು ಅದನ್ನು ಹೊಲದಲ್ಲೇ ತೋರಿಸಬೇಕು! ಈ ಸರಳ ಸೂತ್ರವನ್ನು ಮುಂದಿಟ್ಟುಕೊಂಡು ಧಾರವಾಡದ ನೆಲ ಮತ್ತು ಜಲ ನಿರ್ವಹಣಾ ಸಂಸ್ಥೆ (ವಾಲ್ಮಿ) ರೈತರ ಬಳಿಗೆ ಹೆಜ್ಜೆ ಹಾಕಿದೆ.

ಅಜೀಜಅಹ್ಮದ ಬಳಗಾನೂರ

ಧಾರವಾಡ:

ತರಗತಿಯಲ್ಲಿ ಹೇಳಿದ ಮಾತು ಹೊಲದಲ್ಲಿ ಅಳವಡಿಕೆಯಾಗಬೇಕಾದರೆ, ಮೊದಲು ಅದನ್ನು ಹೊಲದಲ್ಲೇ ತೋರಿಸಬೇಕು! ಈ ಸರಳ ಸೂತ್ರವನ್ನು ಮುಂದಿಟ್ಟುಕೊಂಡು ಧಾರವಾಡದ ನೆಲ ಮತ್ತು ಜಲ ನಿರ್ವಹಣಾ ಸಂಸ್ಥೆ (ವಾಲ್ಮಿ) ರೈತರ ಬಳಿಗೆ ಹೆಜ್ಜೆ ಹಾಕಿದೆ.

ಮಣ್ಣು ಮತ್ತು ನೀರಿನ ಸಂರಕ್ಷಣೆ, ನೀರಿನ ಮಿತ ಬಳಕೆ, ಬೆಳೆ ಬದಲಾವಣೆ, ಪರ‍್ಯಾಯ ಬೆಳೆ ಪದ್ಧತಿ, ಮಣ್ಣು ಪರೀಕ್ಷೆ ಹಾಗೂ ಸಾವಯವ- ಹಸಿರೆಲೆ ಗೊಬ್ಬರ ಬಳಕೆ... ಹೀಗೆ ತರಗತಿಯಲ್ಲಿ ಕಲಿಸುವ ತಂತ್ರಜ್ಞಾನವನ್ನು ಸಂಸ್ಥೆಯ ಆವರಣದಲ್ಲಿರುವ ಸುಮಾರು 52 ಎಕರೆ ಪ್ರಾತ್ಯಕ್ಷಿಕಾ ಕ್ಷೇತ್ರದಲ್ಲೇ ಅನುಷ್ಠಾನಗೊಳಿಸಿ ರೈತರಿಗೆ ತೋರಿಸಲಾಗುತ್ತಿದೆ.

"Seeing is believing " ಎಂಬ ತತ್ವದಡಿ ನಡೆಯುತ್ತಿರುವ ಈ ಪ್ರಯತ್ನದಲ್ಲಿ ಕಬ್ಬು, ಭತ್ತ, ಮೆಕ್ಕೆಜೋಳದಂತಹ ಹೆಚ್ಚು ನೀರು ಬೇಡುವ ಬೆಳೆಗಳಿಗೆ ಪರ‍್ಯಾಯವಾಗಿ ಸೋಯಾ ಅವರೆ, ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ತೋರಿಸಲಾಗುತ್ತಿದೆ. ಯಾವ ಬೆಳೆ, ಯಾವ ಪದ್ಧತಿ, ಎಷ್ಟು ನೀರು, ಎಷ್ಟು ವೆಚ್ಚ, ಎಷ್ಟು ಲಾಭ ಎಂಬುದನ್ನು ರೈತರು ಕಣ್ಣಾರೆ ಗಮನಿಸಿ ತಮ್ಮ ಹೊಲದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ.

ರೈತರಿಗೆ ತರಬೇತಿ:

ಜಲ ಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ವಾಲ್ಮಿ, ರಾಜ್ಯದ ಕೃಷ್ಣ ಮೇಲ್ದಂಡೆ ಯೋಜನೆ, ತುಂಗಭದ್ರಾ, ಕಾವೇರಿ ಜಲಾನಯನ, ಮಲಪ್ರಭಾ ಹಾಗೂ ಘಟಪ್ರಭಾ ಸೇರಿದಂತೆ ಆರು ಅಚ್ಚುಕಟ್ಟು ಪ್ರದೇಶಗಳ ರೈತರಿಗೆ ಮಣ್ಣು, ನೀರು ಮತ್ತು ಕೃಷಿ ನಿರ್ವಹಣೆ ಕುರಿತು ಒಳಾಂಗಣ ಹಾಗೂ ಕ್ಷೇತ್ರಮಟ್ಟದ ತರಬೇತಿ ನೀಡುತ್ತಿದೆ. ಮಣ್ಣು ಪರೀಕ್ಷೆಯಿಂದ ಹಿಡಿದು ನೀರಿನ ಸಮರ್ಪಕ ಬಳಕೆ, ಬೆಳೆ ಬದಲಾವಣೆಯಿಂದ ಹಿಡಿದು ಮಣ್ಣಿನ ಫಲವತ್ತತೆ ಕಾಪಾಡುವ ವಿಧಾನಗಳವರೆಗೆ ತರಬೇತಿ ನೀಡಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸವಳು-ಜವಳು ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಅತಿಯಾದ ನೀರಿನ ಬಳಕೆ ಹಾಗೂ ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯುವುದರಿಂದ ಮಣ್ಣಿನ ಗುಣಮಟ್ಟ ಕುಸಿಯುವ ಅಪಾಯದ ಕುರಿತು ತಿಳಿವಳಿಕೆ ಮೂಡಿಸಿ, ಕಡಿಮೆ ನೀರಿನಲ್ಲಿ ಹೆಚ್ಚು ಪರಿಣಾಮ ನೀಡುವ ಕೃಷಿ ಪದ್ಧತಿಗಳತ್ತ ರೈತರನ್ನು ಸೆಳೆಯಲಾಗುತ್ತಿದೆ.

ಸಂಘಗಳ ಬಲವರ್ಧನೆಗೂ ಒತ್ತು:

ನೀರಿನ ಸಮರ್ಪಕ ನಿರ್ವಹಣೆಯಲ್ಲಿ ರೈತರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶದಿಂದ ನೀರು ಬಳಕೆದಾರರ ಸಂಘಗಳಿಗೂ ವಾಲ್ಮಿ ತರಬೇತಿ ನೀಡುತ್ತಿದೆ. ರಾಜ್ಯದಲ್ಲಿ ಸುಮಾರು 5,400 ನೀರು ಬಳಕೆದಾರರ ಸಂಘಗಳು ನೋಂದಣಿಯಾಗಿದ್ದು, 2,854 ಸಂಘಗಳು ಸಕ್ರಿಯವಾಗಿವೆ. ಸಂಘಗಳ ಸದಸ್ಯರು, ಪದಾಧಿಕಾರಿಗಳು ಹಾಗೂ ಎಂಜಿನಿಯರ್‌ಗಳಿಗೆ ಆಡಳಿತ, ನೀರು ನಿರ್ವಹಣೆ ಮತ್ತು ಸಂಘಗಳ ಬಲವರ್ಧನೆ ಕುರಿತು ತರಬೇತಿ ನೀಡಲಾಗುತ್ತಿದೆ.

ವಾಲ್ಮಿಯ ತರಬೇತಿ ಕೇಂದ್ರಕ್ಕೆ ರೈತರನ್ನು ಕರೆತರುವುದಷ್ಟೇ ಅಲ್ಲ, "ವಾಲ್ಮಿ ನಡೆ ರೈತರ ಕಡೆ " ಕಾರ್ಯಕ್ರಮದಡಿ ಸಂಸ್ಥೆಯ ಸಿಬ್ಬಂದಿ ಹಳ್ಳಿಗಳತ್ತ ತೆರಳಿ ನೇರ ತರಬೇತಿ ನೀಡುತ್ತಿದ್ದಾರೆ.

150 ರೈತರ ಬದುಕಿನಲ್ಲಿ ಬದಲಾವಣೆ?:

ತರಬೇತಿ ನೀಡಿದೆವು ಎಂಬುದಕ್ಕೆ ಮಾತ್ರ ಸೀಮಿತವಾಗದೆ, ಅದರ ಫಲಶೃತಿಯನ್ನೂ ದಾಖಲಿಸುವ ಪ್ರಯತ್ನ ವಾಲ್ಮಿಯಿಂದ ನಡೆಯುತ್ತಿದೆ. ಆರು ಅಚ್ಚುಕಟ್ಟು ಪ್ರದೇಶಗಳಿಂದ ತಲಾ 25 ರೈತರಂತೆ ಒಟ್ಟು 150 ರೈತರನ್ನು ಆಯ್ಕೆ ಮಾಡಿ, ತರಬೇತಿಯ ಬಳಿಕ ಅವರು ಅಳವಡಿಸಿಕೊಂಡ ತಂತ್ರಜ್ಞಾನ, ಕೃಷಿ ಪದ್ಧತಿಯ ಬದಲಾವಣೆ ಹಾಗೂ ಆದಾಯದ ಪರಿಣಾಮವನ್ನು ಕ್ಷೇತ್ರಮಟ್ಟದಲ್ಲಿ ದಾಖಲಿಸಲಾಗಿದೆ. ಈ ರೈತರ ಅನುಭವಗಳನ್ನು ಇತರ ಕೃಷಿಕರಿಗೆ ಮಾದರಿಯಾಗಿಸುವ ಉದ್ದೇಶದಿಂದ ಯಶೋಗಾಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಸಿದ್ಧತೆಯೂ ನಡೆದಿದೆ.

ತಂತ್ರಜ್ಞಾನವನ್ನು ರೈತರಿಗೆ ಹೇಳುವುದಕ್ಕಿಂತ ತೋರಿಸಿದರೆ ಅಳವಡಿಕೆ ಹೆಚ್ಚುತ್ತದೆ. ನೆಲ-ಜಲ ಸಂರಕ್ಷಣೆ, ನೀರಿನ ಮಿತ ಬಳಕೆ ಹಾಗೂ ಸುಸ್ಥಿರ ಕೃಷಿಯ ಮೂಲಕ ರೈತರ ಆದಾಯ ಹೆಚ್ಚಿಸುವುದು ವಾಲ್ಮಿಯ ಗುರಿ.

ಡಾ. ಗಿರೀಶ್ ಎನ್. ಮರಡ್ಡಿ, ವಾಲ್ಮಿ ನಿರ್ದೇಶಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೀಟ, ರೋಗ, ಕಳೆ ನಿಯಂತ್ರಣಕ್ಕೆ ಆರ್ಕಿವೋ ಅಸ್ತ್ರ!
ಕಲೆ, ಸಂಸ್ಕೃತಿ, ಪರಂಪರೆಗೆ ಹವ್ಯಕರ ಕೊಡುಗೆ ಅಪಾರ