ಕನ್ನಡಪ್ರಭ ವಾರ್ತೆ ಪಾವಗಡ
ತಡ ರಾತ್ರಿ ದೊಡ್ಡ ಪ್ರಮಾಣದ ಮಳೆ ಬಿದ್ದ ಪರಿಣಾಮ ಲಕ್ಷಾಂತರ ರು, ಮೌಲ್ಯದ ಅಡಕೆ ಮರಗಳು ನೆಲಕ್ಕುರುಳಿದ ಘಟನೆ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ನಡೆದಿದೆ.ಗುಡುಗು ಸಹಿತ ಧಾರಕಾರವಾಗಿ ಸುರಿದ ಮಳೆಯಿಂದ ಫಸಲಿಗೆ ಬಂದಿದ್ದ ನೂರಾರು ಅಡಕೆ ಮರಗಳು ಮುರಿದು ಬಿದ್ದಿದ್ದು ರೈತ ಆತಂಕಕ್ಕಿಡಾಗಿದ್ದಾರೆ. ತಾಲೂಕಿನ ನಿಡಗಲ್ ಹೋಬಳಿ ವ್ಯಾಪ್ತಿಯ ಅರಸೀಕೆರೆ ಗ್ರಾಮದ ರೈತ ಪ್ರಕಾಶ್ ಎಂಬುವರು ವ್ಯವಸಾಯದಿಂದ ಜೀವನ ಸಾಗಿಸುತ್ತಿದ್ದರು. ತಮಗೆ ಸೇರಿದ್ದ ಗ್ರಾಮದ ಸರ್ವೆ ನಂಬರ್ 127/ 2 ರ ಐದು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ.
ಈ ಪೈಕಿ ಲಾಭದಾಯ ಬೆಳೆ ಜೀವನ ನಿರ್ವಹಣೆಗೆ ಅಶ್ರಯದಾಯಕವಾಗಲಿರುವ ವಿಶ್ವಾಸದಿಂದ ಮೂರು ಎಕರೆ ಪ್ರದೇಶದಲ್ಲಿ ಅಡಕೆ ಸಸಿ ನಾಟಿ ಮಾಡಿ, ಡ್ರಿಪ್ ಮೂಲಕ ನೀರು ಹಾಯಿಸುತ್ತಿದ್ದರು. ಕಳೆದ 12 ವರ್ಷಗಳಿಂದ ಬೆಳೆ ಸಂರಕ್ಷಣೆ ಮಾಡುತ್ತಿದ್ದು, ಇನ್ನೇನು ಫಸಲಿಗೆ ಬಂದು ಕಾಯಿ ಬಿಡುವ ವೇಳೆ ಬಾರಿ ಪ್ರಮಾಣದ ಮಳೆಯಿಂದಾಗಿ ನೂರಾರು ಅಡಕೆ ಹಾಗೂ ಇತರೆ ಬೆಲೆಬಾಳುವ ಮರಗಳು ನೆಲಕ್ಕುರಳಿವೆ. ಸುಮಾರು 2 ಲಕ್ಷ ರು ಬೆಳೆ ನಷ್ಟವಾಗಿರುವುದಾಗಿ ಆಂದಾಜಿಸಲಾಗಿದೆ.ಇದೇ ಗ್ರಾಮದ ಹಲವು ರೈತರು ಬೆಳೆಸಿದ್ದ ಅಡಿಕೆ ಮರಗಳ ಮಳೆಯಿಂದ ನೆಲಕ್ಕುರಳಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಇದರಿಂದ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ. ಜಿಲ್ಲಾಡಳಿತ ನೆರೆವಿಗೆ ದಾವಿಸಿ ನಷ್ಟಕ್ಕಿಡಾದ ರೈತರಿಗೆ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.
ಮಳೆಯಿಂದ ಬೆಳೆ ನಷ್ಟದ ಬಗ್ಗೆ ವರದಿಯಾಗಿದ್ದರೂ ಸಂಬಂಧಪಟ್ಟ ಇಲ್ಲಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ವರದಿ ಪಡೆಯಿಲ್ಲ ಎಂದು ಸ್ಥಳೀಯರ ಆರೋಪಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಬೆಳೆ ನಷ್ಟದ ದಾಖಲೆ ಸಮೇತ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ಮಳೆ ಬಂದರೂ, ಬರದಿದ್ದರೂ ರೈತರೆ ನಷ್ಟಕ್ಕಿಡಾಗುವುದು ಸಾಮಾನ್ಯವಾಗಿದೆ. ರೈತರ ಗೋಳು ಮಾತ್ರ ಸರ್ಕಾರದ ಕಿವಿಗೆ ಕೇಳಿಸುತ್ತಿಲ್ಲ. ಕೂಡಲೇ ಅರಸೀಕೆರೆಗೆ ಭೇಟಿ ನೀಡಿ ತೋಟಗಾರಿಕೆ ಬೆಳೆ ನಷ್ಟದ ವರದಿ ಪಡೆದು ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸ್ಥಳೀಯ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.