ವಾಂಗ್ಚುಕ್ ನಿರಶನ: ರಾಷ್ಟ್ರಪತಿ ಹಸ್ತಕ್ಷೇಪಕ್ಕೆ ಆಗ್ರಹ

KannadaprabhaNewsNetwork |  
Published : Jul 17, 2026, 01:30 AM IST
16ಕೆಪಿಆರ್‌ಸಿಆರ್‌ 01 | Kannada Prabha

ಸಾರಾಂಶ

ರಾಯಚೂರಿನ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಶಿಕ್ಷಣ ತಜ್ಞ ಸೋನಮ್‌ ವಾಂಗ್ಚುಕ್‌ ಹಾಗೂ ಉಪವಾಸ ನಿರತ ವಿದ್ಯಾರ್ಥಿಗಳ ಜೀವಗಳನ್ನು ರಕ್ಷಿಸಲು ಮತ್ತು ಪರೀಕ್ಷಾ ಅಕ್ರಮಗಳಿಗೆ ಹೊಣೆಗಾರಿಕೆಯನ್ನು ಖಚಿತ ಪಡಿಸಿಕೊಳ್ಳಲು ರಾಷ್ಟ್ರಪತಿಗಳು ತಕ್ಷಣ ಹಸ್ತಕ್ಷೇಪಕ್ಕೆ ಮುಂದಾಗಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಟಿಪ್ಪು ಸುಲ್ತಾನ್‌ ಉದ್ಯಾನವನದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ನಂತರ ಜಿಲ್ಲಾಡಳಿತದ ಮುಖಾಂತರ ರಾಷ್ಟ್ರಪತಿಗೆ ಮನವಿ ಪತ್ರ ರವಾನಿಸಿದರು.

ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಹಾಗೂ ವಿದ್ಯಾರ್ಥಿ ಸಂಘಟನೆಗಳು ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಕಳೆದ 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದಕ್ಕೆ ಇಡೀ ದೇಶವೇ ಬೆಂಬಲಿಸುತ್ತಿದೆ. ಕೇಂದ್ರ ಸರ್ಕಾರದ ಶಿಕ್ಷಣ ನೀತಿ, ಪದೇಪದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆ ಹಾಗೂ ದೇಶದ ಶಿಕ್ಷಣ ವ್ಯವಸ್ಥೆಯ ಹಲವು ಲೋಪ ದೋಷಗಳನ್ನು ಖಂಡಿಸಿ ಮತ್ತು ನೈತಿಕ ಹೊಣೆ ಹೊತ್ತು ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಸೋನಮ್ ವಾಂಗ್ಚುಕ್ ಮತ್ತು ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಗಳು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿವೆ. ಆದರೆ ಕೇಂದ್ರ ಸರ್ಕಾರ ಕನಿಷ್ಠ ಸೌಜನ್ಯಕ್ಕಾದರೂ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಅಹವಾಲುಗಳನ್ನು ಆಲಿಸಿಲ್ಲ. ಇದು ಸರ್ವಾಧಿಕಾರಿ ಮತ್ತು ಫ್ಯಾಸಿಸ್ಟ್ ಸರ್ಕಾರದ ಶಿಕ್ಷಣ ಮತ್ತು ಜನವಿರೋಧಿ ನೀತಿಗೆ ಜ್ವಲಂತ ಸಾಕ್ಷಿಯಾಗಿದೆ. ಹಾಗಾಗಿ ಸರ್ಕಾರದ ಈ ಬೇಜವಾ ಬ್ದಾರಿಯನ್ನು ವಿರೋಧಿಸಿ, ಸಾರ್ವಜನಿಕ ಶಿಕ್ಷಣ ಬಲಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಗೆ ಬರೆದ ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿ ಸಂಚಾಲಕರಾದ ರಾಘವೇಂದ್ರ ಕುಷ್ಟಗಿ, ಚಾಮರಸ ಮಾಲಿಪಾಟೀಲ್‌, ಎನ್‌.ದೇವೇಂದ್ರಗೌಡ, ಬಿ.ಬಸವರಾಜ, ಕರಿಯಪ್ಪ ಅಚ್ಚೊಳ್ಳಿ, ಎಂ.ಆರ್‌.ಭೇರಿ, ಚಂದ್ರಶೇಕರ ನೆಲಹಾಳ, ಬಸವಂತರಾಯ ಗೌಡ, ಬೂದಯ್ಯ ಸ್ವಾಮಿ ಗಬ್ಬೂರು, ವಿದ್ಯಾ ಪಾಟೀಲ್‌, ಸುಲೋಚನಾ, ಪ್ರಭಾಕರ ಪಾಟೀಲ್‌ ಇಂಗಳದಾಳ, ಡಿ.ಎಸ್‌.ಶರಣಬಸವ ಸೇರಿದಂತೆ ಸಂಘಟನೆಗಳ ಮುಖಂಡರು ಇದ್ದರು.

ನೀಟ್ ಪರೀಕ್ಷೆಯಲ್ಲಿ ಅಕ್ರಮ: ನೈತಿಕತೆ ತೋರದ ಕೇಂದ್ರ

ರಾಯಚೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯಿಂದ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ವಿದ್ಯಾರ್ಥಿಗಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಕೇಂದ್ರದವರು ಮಾನವೀಯ ಸಂವೇದನೆಯನ್ನೇ ಕಳೆದುಕೊಂಡಿದ್ದಾರೆ, ಅಕ್ರಮದ ಕುರಿತು ನೈತಿಕತೆ ತೋರದ ಬಿಜೆಪಿ ನಡೆಯು ಖಂಡನೀಯವಾಗಿದೆ ಎಂದು ವಿದ್ಯಾರ್ಥಿ ಯುವಜನ ಒಕ್ಕೂಟದ ಸಂಚಾಲಕ ಶರಣುಕುಮಾರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪ್ರಶ್ನೆಪರೀಕ್ಷೆ ಸೋರಿಕೆಯಿಂದ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಜೀವನ ದೊಂದಿಗೆ ಚೆಲ್ಲಾಟವಾಡುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಬಹುದೊಡ್ಡ ಜಾಲವಿದ್ದರೂ ಕೇಂದ್ರದ ಶಿಕ್ಷಣ ಸಚಿವರು ತಡೆಯುಲ್ಲಿ ವಿಫಲರಾಗಿದ್ದು, ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ 25 ದಿನಗಳಿಂದ ಕಾಕರೋಚ್ ಪಾರ್ಟಿ ನೇತೃತ್ವದಲ್ಲಿ ಹೋರಾಟಗಾರ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕನಿಷ್ಟ ಸ್ಪಂದಿಸುವ ಕೆಲಸಮಾಡಿಲ್ಲ. ಸಂವೇದನೆಯನ್ನೇ ಕಳೆದುಕೊಂಡಿದ್ದರಿಂದ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹವನ್ನು ಕೈ ಬಿಟ್ಟು ಹೋರಾಟವನ್ನು ತೀವ್ರಗೊಳಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಫಜ್ಲ್ ಖಾನ್, ಒಕ್ಕೂಟದ ಸದಸ್ಯರಾದ ವಿಶ್ವನಾಥ ಬಲ್ಲಿದವ, ಪ್ರದೀಲ್, ಪ್ರವೀಣಕುಮಾರ, ಮೋಹನ್ ಸೇರಿ ಅನೇಕರಿದ್ದರು.

ಇಂದು ಸಿಂಧನೂರಿನಲ್ಲಿ ಧರಣಿ ಸತ್ಯಾಗ್ರಹ

ಸಿಂಧನೂರು: ಹೊಸದಿಲ್ಲಿಯ ಜಂತರ್ ಮಂತರ್‌ ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ವಿದ್ಯಾರ್ಥಿ ಸಂಘಟನೆಗಳ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಈ ಹೋರಾಟವನ್ನು ಬೆಂಬಲಿಸಿ ಜು.17 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಬೇಜವಾಬ್ದಾರಿಯನ್ನು ವಿರೋಧಿಸಿ, ಸಾರ್ವಜನಿಕ ಶಿಕ್ಷಣ ಬಲಪಡಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಈ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು, ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯಗಳ ಮನವಿ ಪತ್ರವನ್ನು ರವಾನಿಸಲಾಗುವುದು. ಈ ಹೋರಾಟದಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಜನರು, ಮಹಿಳೆಯರು ಹಾಗೂ ಪ್ರಜಾಸತ್ತಾತ್ಮಕ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಒಕ್ಕೂಟದ ಸಂಚಾಲಕರಾದ ಚಂದ್ರಶೇಖರ ಗೊರಬಾಳ, ಎಸ್.ದೇವೇಂದ್ರಗೌಡ, ನಾಗರಾಜ ಪೂಜಾರ್ ಹಾಗೂ ಬಸವರಾಜ ಬಾದರ್ಲಿ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳಗನ್ನಡ ಅಭಿವ್ಯಕ್ತಿ ಕೌಶಲಗಳ ಶೋಧನೆ ಅಗತ್ಯ
ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಬದ್ಧ; ಮುನಿಯಪ್ಪ