ಎಲ್.ವಿ.ನವೀನ್‌ಕುಮಾರ್
ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆ ಮ್ಯೂಸಿಯಂ, ಮಾನಿಮೆಂಟ್, ಮದ್ದಿನ ಮನೆ ಸೇರಿದಂತೆ ಶ್ರೀರಂಗಪಟ್ಟಣ ಹಾಗೂ ತಾಲೂಕಿನಾದ್ಯಂತ 70ಕ್ಕೂ ಹೆಚ್ಚು ಆರ್‌ಟಿಸಿಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸರ್ಕಾರಿ ಆಸ್ತಿಗಳಲ್ಲದೆ ಪಟ್ಟಣ ಹಾಗೂ ತಾಲೂಕಿನ ಹಲವು ರೈತರ ಜಮೀನುಗಳ ಆರ್‌ಟಿಸಿಯಲ್ಲಿನ ಕಾಲಂ ನಂ.11ರಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿರುವುದು ಸಾರ್ವಜನಿಕರು ಹಾಗೂ ರೈತರಲ್ಲಿ ಆತಂಕ ಸೃಷ್ಟಿಸಿದೆ.ಇತ್ತೀಚೆಗಷ್ಟೇ ತಾಲೂಕಿನ ಮಹದೇವಪುರ ಗ್ರಾಮದ ಚಿಕ್ಕಮ್ಮ ಚಿಕ್ಕದೇವಿ ದೇವಾಲಯ ಹಾಗೂ ಚಂದಗಾಲು ಗ್ರಾಮದ ಸರ್ಕಾರಿ ಶಾಲೆ ಕೂಡ ವಕ್ಫ್ ಮಂಡಳಿ ಆಸ್ತಿ ಎಂಬುದು ಬೆಳಕಿಗೆ ಬಂದಿತ್ತು. ಇದೀಗ ತಾಲೂಕಿನಾದ್ಯಂತ ಹಲವು ಆರ್‌ಟಿಸಿಗಳಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿರುವುದು ಅಚ್ಚರಿಯ ಜೊತೆಗೆ ಮುಂದೇನು ಎಂಬ ಆತಂಕವನ್ನು ಸೃಷ್ಟಿ ಮಾಡಿದೆ.
ಸರ್ವೇ ನಂ. 343/1, 343/2, 343/3, 343/4 ಹಾಗೂ 143/5ರ ಆಸ್ತಿಯು ರಘು ಚೈತನ್ಯ ವೈ.ನಾಯಕ್ ಬಿನ್ ಯಶೋಧರ ಜಿ.ನಾಯಕ್ ಎಂಬುವವರಿಗೆ ಸೇರಿದ್ದ 4 ಎಕರೆಗೂ ಹೆಚ್ಚು ಆಸ್ತಿ ಕೂಡ ಕರ್ನಾಟಕ ರಾಜ್ಯ ವಕ್ಫ್ ಆಸ್ತಿ ಎಂದು ನಮೂದಾಗಿದೆ.
ಮತ್ತಷ್ಟು ಆಳವಾಗಿ ಒಳವೊಕ್ಕಿ ಪರಿಶೀಲಿಸಿದ್ದಲ್ಲಿ ವಕ್ಫ್ ಬೋರ್ಡ್ ಗುಮ್ಮ ಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆ ಎಂಬುದು ಬೆಳಕಿಗೆ ಬರಬೇಕಾಗಿದೆ. ಜೊತೆಗೆ ಈ ಎಲ್ಲಾ ಆಸ್ತಿಗಳು ವಕ್ಫ್ ಬೋರ್ಡ್‌ಗೆ ಸೇರಿರುವ ಬಗ್ಗೆ ಬಹುತೇಕ ರೈತರಿಗೆ ಅರಿವಿಲ್ಲದಿರುವುದು ವಿಪರ್‍ಯಾಸದ ಸಂಗತಿ.
ಮ್ಯುಟೇಶನ್ (ಎಂ.ಆರ್) ಪ್ರತಿಗಳಲ್ಲಿ ಕೋರ್ಟ್ ಆದೇಶ ಎಂದು ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ಪಹಣ ಬದಲಾವಣೆ ಮಾಡಿ ಆರ್‌ಟಿಸಿಯ ಕಲಂ ನಂ.11ರಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗಿ ಬರುತ್ತಿದೆ. ಈ ಬೆಳವಣಿಗೆಯು ತಾಲೂಕಿನಾದ್ಯಂತ ಸಾರ್ವಜನಿಕರು ಹಾಗೂ ರೈತರಲ್ಲಿ ಹೆಚ್ಚಿನ ಆತಂಕ ಸೃಷ್ಟಿ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜಮೀನುಗಳು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗುವ ಭೀತಿ ಎದುರಾಗಿದೆ.