ವಕ್ಫ್ ಸಮಸ್ಯೆ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು: ಶಾಸಕ ತನ್ವೀರ್ ಸೇಠ್ ಸಲಹೆ

KannadaprabhaNewsNetwork | Updated : Nov 11 2024, 12:57 AM IST

ಸಾರಾಂಶ

ವಕ್ಫ್ ವಿಷಯವನ್ನು ಹಾದಿ ಬೀದಿಯಲ್ಲಿ ಯಾರೂ ಮಾತನಾಡಬಾರದು. ಇದು ಇನ್ನಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ವಕ್ಫ್ ಗೆ ಮೀಸಲಿಟ್ಟ ಆಸ್ತಿಯಲ್ಲಿ ಧರ್ಮದ ರಕ್ಷಣೆ ಮಾಡಬೇಕು. ಇದರಿಂದ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಕ್ಫ್‌ ವಿಚಾರದಲ್ಲಿ ಹಾದಿ ಬೀದಿಯಲ್ಲಿ ಮಾತನಾಡದೆ ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಟಿಪ್ಪು ಜಯಂತಿ ಅಂಗವಾಗಿ ಪಟ್ಟಣದ ಗಂಜಾಂನ ಗುಂಬಸ್ ನ ಟಿಪ್ಪು ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ನಂತರ ಪ್ರಾರ್ಥನೆ ಸಲ್ಲಿಸಿ ಮಾತನಾಡಿ, ಸರ್ಕಾರ ಯಾರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡದೆ ಸಮಸ್ಯೆ ಇರುವವರಿಗೆ ಮೇಲ್ಮನವಿಗೆ ಅವಕಾಶ ನೀಡಿ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದರು.

ವಕ್ಫ್ ವಿಷಯವನ್ನು ಹಾದಿ ಬೀದಿಯಲ್ಲಿ ಯಾರೂ ಮಾತನಾಡಬಾರದು. ಇದು ಇನ್ನಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ವಕ್ಫ್ ಗೆ ಮೀಸಲಿಟ್ಟ ಆಸ್ತಿಯಲ್ಲಿ ಧರ್ಮದ ರಕ್ಷಣೆ ಮಾಡಬೇಕು. ಇದರಿಂದ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಚುನಾವಣೆ ಸಮಯದಲ್ಲಿ ಮಾತ್ರ ಇಂತಹ ವಿಚಾರಗಳು ಹೊರ ಬರುತ್ತವೆ. ಚನ್ನಪಟ್ಟಣ ಸೇರಿದಂತೆ ಇತರೆಡೆ ಉಪ ಚುನಾವಣೆ ಕಾರಣದಿಂದ ಹೊಸದಾಗಿ ಈ ವಕ್ಫ್ ವಿಚಾರ ಚರ್ಚೆಗೆ ಬಂದಿದೆ. ಆದಷ್ಟು ಬೇಗ ಈ ವಿಷಯವನ್ನು ಬಗೆಹರಿಸಿದರೆ ಒಳ್ಳೆಯದು ಎಂದರು.

ಹಲವು ವರ್ಷಗಳಿಂದ ಟಿಪ್ಪು ಸುಲ್ತಾನರ ಜನ್ಮ ದಿನವನ್ನು ಗುಂಬಜ್‌ನಲ್ಲಿ ಆಚರಿಸುತ್ತಾ ಬಂದಿದ್ದೇವೆ. ನಮ್ಮ ನಂಬಿಕೆ ವಿಚಾರವಾಗಿ ಟಿಪ್ಪು ಸುಲ್ತಾನರ ಸಿದ್ಧಾಂತಗಳನ್ನು ಇಟ್ಟುಕೊಂಡು ಪ್ರಾರ್ಥನೆ ಮಾಡುತ್ತೇವೆ. ಇದೇನು ಹೊಸದಲ್ಲ. ಸಾಮೂಹಿಕ ಪ್ರಾರ್ಥನೆಗಳು ಹಿಂದಿನಿಂದಲೂ ನಡೆದು ಬಂದಿವೆ ಎಂದು ಹೇಳಿದರು.

ಟಿಪ್ಪು ಜಯಂತಿ ಅಂಗವಾಗಿ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ನಾವು ಸಹ ಗುಂಪು ಕಟ್ಟಿಕೊಂಡು ಬರೋದು ಬೇಡ ಎಂದು ಎಲ್ಲರಿಗೂ ಹೇಳಿದ್ದೇವೆ. ಹೊರಗೆ ಯಾವುದೇ ಕಾರ್ಯಕ್ರಮ ಮಾಡುತ್ತಿಲ್ಲ. ಎಲ್ಲರನ್ನೂ ಶಾಂತಿಯುತವಾಗಿ ಎಲ್ಲರನ್ನು ಗೌರವದಿಂದ ಕಾಣಬೇಕು. ಯಾರಿಗೂ ತೊಂದರೆ ಆಗಬಾರದು ಎಂದು ನಾವು ಬಂದು ಇಂದು ಕೇವಲ ಪ್ರಾರ್ಥನೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಶಾಸಕ ತನ್ವೀರ್ ಸೇಠ್ ಅವರ ಅಭಿಮಾನಿಗಳು, ಆಪ್ತರು ಮಾತ್ರ ಜೊತೆಯಲ್ಲಿದ್ದರು.

Share this article