ನಾರಾಯಣ ಹೆಗಡೆ
ವಾಣಿಜ್ಯ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ಕೊರತೆ ಎದುರಾಗಿದ್ದರಿಂದ ಇದರ ದರ ದಿಢೀರ್ ಹೆಚ್ಚಳವಾಗಿದ್ದು, ಆಟೋ ಚಾಲಕರು ಪರದಾಡುವಂತಾಗಿದೆ. ನಗರದ ಹಾನಗಲ್ಲ ರಸ್ತೆಯಲ್ಲಿರುವ ಗೋ ಗ್ಯಾಸ್ ಬಂಕ್‌ನಲ್ಲಿ ಸಮರ್ಪಕವಾಗಿ ಗ್ಯಾಸ್ ಪೂರೈಕೆಯಾಗದ ಪರಿಣಾಮದ ಗ್ಯಾಸ್ ವ್ಯತ್ಯಯದ ಬ್ಯಾನರ್ ಹಾಕಲಾಗಿದೆ. ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆ ಆಟೋ ಚಾಲಕರಿಗೆ ಗ್ಯಾಸ್ ಕೊರತೆ ಸಾಧ್ಯತೆ ಇದ್ದು, ಸಹಕರಿಸಬೇಕು ಎನ್ನುವ ಬ್ಯಾನರ್ ಅಳವಡಿಸಲಾಗಿದೆ.
15 ದಿನಗಳ ಹಿಂದೆ ಒಂದು ಕೆಜಿ ಗ್ಯಾಸ್ ಬೆಲೆ ₹50 ಇತ್ತು. ಈಗ ಕೆಜಿಗೆ ಗ್ಯಾಸ್‌ಗೆ ₹70 ಆಗಿದೆ. ಆಟೋ ಓಡಿಸಿ ಜೀವನ ಮಾಡುವ ಆಟೋ ಚಾಲಕರ ಪರಿಸ್ಥಿತಿ ಏನು ಎಂದು ಆಟೋರಿಕ್ಷಾ ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ ಗ್ಯಾಸ್ ಬೆಲೆ ಕಡಿಮೆ ಮಾಡಬೇಕು. ಪ್ರಯಾಣಿಕರಿಗೆ ₹10 ಹೆಚ್ಚಿಗೆ ಕೇಳಿದರೆ ಜಗಳ ಮಾಡುತ್ತಾರೆ ಎಂದು ಆಟೋ ಚಾಲಕ ಈರಣ್ಣ ಆಲದಕಟ್ಟಿ ಸಂಕಷ್ಟ ತೋಡಿಕೊಂಡರು.ಇರಾನ್-ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಭಾರತಕ್ಕೂ ತಟ್ಟುತ್ತಿದ್ದು, ಗೃಹ ಬಳಕೆ ಸಿಲಿಂಡರ್ ₹60 ಏರಿಕೆ ಆಗುವ ಮೂಲಕ ಜನಸಾಮಾನ್ಯರ ಜೇಬಿಕೆ ಕತ್ತರಿ ಹಾಕಿದೆ. ಯುದ್ಧದ ಬಿಕ್ಕಟ್ಟಿನಿಂದಾಗಿ ಜಿಲ್ಲೆಯಲ್ಲಿ ಅನಿಲ ಪೂರೈಕೆ ಸ್ಥಗಿತದ ಆತಂಕ ಎದುರಾಗಿದೆ. ಗೃಹ ಬಳಕೆ ಸಿಲಿಂಡರ್ ಪಡೆಯಲು ಬುಕಿಂಗ್‌ಗೆ ಹೆಚ್ಚು ಸಮಯ ಕಾಯುವಂತಹ ಅನಿವಾರ್ಯತೆ ಎದುರಿಸುವಂತಾಗಿದೆ. ಇದರೆ ಜತೆಗೆ ವಾಣಿಜ್ಯ ಬಳಕೆ ಅನಿಲಕ್ಕೂ ಕೊರತೆ ಎದುರಾಗಿದ್ದು, ಇದರ ಬಿಸಿ ಹೋಟೆಲ್ ಉದ್ಯಮಕ್ಕೂ ತಟ್ಟುತ್ತಿದೆ. ಇದರಿಂದಾಗಿ ಹೋಟೆಲ್ ಉದ್ಯಮವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಅದೆಷ್ಟೋ ಜನರ ಬದುಕು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಒಂದು ವಾಣಿಜ್ಯ ಸಿಲಿಂಡರ್ ಬೆಲೆ ₹3 ಸಾವಿರಕ್ಕೆ ತಲುಪಿದೆ. ಇದರಿಂದ ಆರ್ಥಿಕವಾಗಿ ಹೊಡೆತ ಬಿದ್ದಿರುವುದರಿಂದ ಕೆಲ ಸಣ್ಣಪುಟ್ಟ ಹೋಟೆಲ್‌ನವರು ತಂದೂರಿ ಬಟ್ಟಿಯನ್ನೇ ಕಟ್ಟಿಗೆ ಒಲೆಯನ್ನಾಗಿ ಮಾರ್ಪಡಿಸಿಕೊಂಡು ಗ್ಯಾಸ್ ಬಳಕೆ ಹೊರೆ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದೇ ಪರಿಸ್ಥಿತಿ ಇನ್ನು ಕೆಲವು ದಿನ ಮುಂದುವರಿದರೆ ಹೋಟೆಲ್ ಬಂದ್ ಮಾಡುವ ಆತಂಕವನ್ನು ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರಗಳು ಗಮನ ಹರಿಸಿ ವಾಣಿಜ್ಯ ಸಿಲಿಂಡರ್ ಅಭಾವ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ಹೋಟೆಲ್ ಮಾಲೀಕರು ಮನವಿ ಮಾಡುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಮೇಲೂ ಕರಿನೆರಳು