ಯುದ್ಧದ ಕಾರ್ಮೋಡ: ಅಮೃತ ಮಹೋತ್ಸವ ಮುಂದಕ್ಕೆ

KannadaprabhaNewsNetwork |  
Published : May 10, 2025, 01:03 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೇಂದ್ರ | Kannada Prabha

ಸಾರಾಂಶ

ಮೇ.13 ರಂದು ಆಯೋಜಿಸಿದ್ದ ಅಮೃತ ಮಹೋತ್ಸವ ಹಾಗೂ ಅಭಿನಂದನಾಗ್ರಂಥ ಬಿಡುಗಡೆ ಸಮಾರಂಭವನ್ನು,ದೇಶದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ಭಾರತದ ಸೈನಿಕರಿಗೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ಮುಂದೂಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಅಭಿಮಾನಿಗಳು, ಹಿತೈಷಿಗಳು, ಸಹಕಾರ ಕ್ಷೇತ್ರದ ಜನರು ಕೆ.ಎನ್.ಆರ್‌ ಅವರಿಗೆ 75 ವರ್ಷತುಂಬಿದ ಹಿನ್ನೆಲೆಯಲ್ಲಿ ಮೇ.13 ರಂದು ಆಯೋಜಿಸಿದ್ದ ಅಮೃತ ಮಹೋತ್ಸವ ಹಾಗೂ ಅಭಿನಂದನಾಗ್ರಂಥ ಬಿಡುಗಡೆ ಸಮಾರಂಭವನ್ನು,ದೇಶದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ಭಾರತದ ಸೈನಿಕರಿಗೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ಮುಂದೂಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯ ಪ್ರತಿಕಾರವಾಗಿ ಭಾರತ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವುದು ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಎರಡು ದೇಶಗಳ ನಡುವೆ ನಡೆಯುತ್ತಿರುವ ಕ್ಷಿಪಣಿ ಮತ್ತು ಯುದ್ಧ ವಿಮಾನಗಳ ಶೆಲ್ ದಾಳಿಯಿಂದ ಉಗ್ರರ ನೆಲೆಗಳು ಧ್ವಂಸಗೊಂಡಿವೆ. ಇಂತಹ ಸಂದರ್ಭದಲ್ಲಿ ಭಾರತೀಯರೆಲ್ಲರೂ ಸೈನಿಕರೊಂದಿಗೆ ನಿಲ್ಲಬೇಕಾಗಿದೆ. ಹಾಗಾಗಿ ಮೇ.13 ರ ಕಾರ್ಯಕ್ರಮ ಮುಂದೂಡಿದ್ದು, ದೇಶದಲ್ಲಿ ವಾತಾವರಣ ತಿಳಿಗೊಂಡ ನಂತರ ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಅಭಿನಂದನಾ ಸಮಿತಿ ತಿಳಿಸಲಿದೆ ಎಂದರು.

ಮೇ.13 ರಂದುಕೆ.ಎನ್.ಆರ್. ಅವರ 75 ನೇ ವರ್ಷದ ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಸರಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಸಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 1.50 ಲಕ್ಷ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಅಭಿನಂದನಾ ಸಮಿತಿ ಮತ್ತು ಕೆ.ಎನ್.ಆರ್.ಅಭಿಮಾನಿಗಳು, ಹಿತೈಷಿಗಳು ಮಾಡಿಕೊಂಡಿದ್ದರು. ಆದರೆ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದಾಗ,ಇಂತಹ ಅದ್ಧೂರಿಯ ಕಾರ್ಯಕ್ರಮ ಮಾಡಿದರೆ ಅದು ಜನರಿಗೆ ಬೇರೆಯದೆ ಸಂದೇಶ ನೀಡಿದಂತಾಗುತ್ತದೆ. ಹಾಗಾಗಿ ಪರಿಸ್ಥಿತಿ ತಿಳಿಯಾಗುವವರೆಗೂ ಕಾಯ್ದು, ತದನಂತರ ಕಾರ್ಯಕ್ರಮ ಮಾಡುವುದಾಗಿ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಹಾಗೂ ಕರ್ನಾಟಕ ಸರಕಾರ ಸಚಿವ ಸಂಪುಟದ ಸಹೋದ್ಯಗಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರುಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಆರ್.ರಾಜೇಂದ್ರ ತಿಳಿಸಿದರು. ಅಭಿನಂದನಾ ಸಮಿತಿ ಅಧ್ಯಕ್ಷರಾದ ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ಸುಮಾರು 600 ಪುಟುಗಳ ಎರಡು ಸಂಪುಟಗಳನ್ನು ಒಳಗೊಂಡಂತೆ ಸಹಕಾರ ಸಚಿವ ಸಮಗ್ರ ಜೀವನ ಮತ್ತು ಸಾಧನೆಯನ್ನು ಒಳಗೊಂಡ ಅಭಿನಂದನಾಗ್ರಂಥ ಮುದ್ರಣ ಆರಂಭವಾಗಿತ್ತು. ಆದರೆ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮೇ.13 ರಕಾರ್ಯಕ್ರಮ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿಯೂ ಇಷ್ಟೇ ಆಸಕ್ತಿಯಿಂದ ಕಾರ್ಯಕ್ರಮ ಆಯೋಜಿಸಲಾಗುವುದುಎಂದರು.ಸುದ್ದಿಗೋಷ್ಠಿಯಲ್ಲಿಅಭಿನಂದನಾ ಸಮಿತಿ ಮುರುಳಿ ಕೃಷ್ಣಪ್ಪ, ಎನ್.ಗೋವಿಂದರಾಜು, ಗಂಗಣ್ಣ, ಕೆ.ಎ.ದೇವರಾಜು, ಧನಿಯಕುಮಾರ್, ಲಕ್ಷ್ಮಿನಾರಾಯಣ್, ಕೊಟ್ಟ ಶಂಕರ್, ಪಿ.ಮೂರ್ತಿ, ಡ್ಯಾಗೇರಹಳ್ಳಿ ವಿರೂಪಾಕ್ಷ, ನಾರಾಯಣಗೌಡ, ಟಿ.ಪಿ.ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಾಕ್ಸ್‌..

ಬಹುಸಂಸ್ಕೃತಿಯ ನಾಡಿಗೆ ತರವಲ್ಲ

ಇಂದಿರಾ ಗಾಂಧಿ ಅವರಿಗೆ ಅವರ ಅಂಗರಕ್ಷಕರೇ ಗುಂಡಿಟ್ಟು ಕೊಂದಾಗ, ಗುಂಡಿಟ್ಟ ವ್ಯಕ್ತಿಗಳ ಸಮುದಾಯವನ್ನು ಅಪರಾಧಿ ಎಂಬಂತೆ ಜನತೆ ನಡೆದುಕೊಳ್ಳಲಿಲ್ಲ. ಈ ಘಟನೆಯಲ್ಲಿಯೂ ಒಂದು ಸಮುದಾಯವನ್ನು ಗುರಿಯಾಗಿಸುವುದು ಭಾರತದಂತಹ ಬಹುಸಂಸ್ಕೃತಿಯ ನಾಡಿಗೆ ತರವಲ್ಲ ಎಂದು ಆರ್‌. ರಾಜೇಂದ್ರ ಹೇಳಿದರು.

ಕೋಟ್‌...

ಭಯೋತ್ಪಾದಕರಿಗೆ ಜಾತಿ, ಧರ್ಮ ಎಂಬುದು ಇಲ್ಲ. ಹಾಗಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೀಯಾಳಿಸುವುದು ತರವಲ್ಲ. ಈ ಹಿಂದೆ ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು ಕೊಂದಿದ್ದು ಸಹ ಓರ್ವ ವ್ಯಕ್ತಿ, ಆದರೆ ಅಂದು ಕೊಲೆ ಮಾಡಿದ ವ್ಯಕ್ತಿಯನ್ನು ಮಾತ್ರ ಅಪರಾದಿ ಎಂದು ತೀರ್ಮಾನಿಸಲಾಯಿತೇ ಹೊರತು, ಆತನ ಧರ್ಮ ಮತ್ತು ಸಮುದಾಯವನ್ನಲ್ಲ - ಆರ್‌. ರಾಜೇಂದ್ರ , ವಿಪ ಸದಸ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ
ಚಿರತೆ ದಾಳಿಗೆ ಮಹಿಳೆ ಬಲಿ