ಲಲಿತಾ ಜಿ.ಟಿ. ದೇವೇಗೌಡರಿಗೆ ಆತ್ಮೀಯ ಅಭಿನಂದನೆ

KannadaprabhaNewsNetwork |  
Published : Jun 13, 2026, 02:00 AM ISTUpdated : Jun 13, 2026, 12:09 PM IST
GT Devegowda

ಸಾರಾಂಶ

ಮಂಡ್ಯದ ಜಿ.ಎಸ್.ಬೊಮ್ಮೇಗೌಡ ಸ್ಮಾರಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆ. ಲಲಿತಾ ಜಿ.ಟಿ.ದೇವೇಗೌಡ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.ನಗರದ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಲಲಿತಾಭಿನಂದನ ಸಮಾರಂಭ

  ಮೈಸೂರು:  ಮಂಡ್ಯದ ಜಿ.ಎಸ್.ಬೊಮ್ಮೇಗೌಡ ಸ್ಮಾರಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆ. ಲಲಿತಾ ಜಿ.ಟಿ.ದೇವೇಗೌಡ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ನಗರದ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಲಲಿತಾಭಿನಂದನ ಸಮಾರಂಭದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಲಲಿತಾ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಅವರು ಮಾತನಾಡಿ, ಲಲಿತಕ್ಕನಿಗೆ ಪ್ರಶಸ್ತಿ ಬಂದ ನೆಪದಲ್ಲಿ ಅಭಿನಂದನೆ ಏರ್ಪಡಿಸಿರುವುದು ನೆಪ ಮಾತ್ರ. ಕುವೆಂಪು ಹೇಳಿದಂತೆ ಮನೆ ಮನೆಯ ತಪಸ್ವಿನಿಯರಾದ ಗೃಹಣಿಯರನ್ನು ಗೌರವಿಸಲು ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜಕಾರಣಿಗಳ ಪತ್ನಿಯರಾಗಿ ಬದುಕುವುದು ಅಷ್ಟು ಸುಲಭವಲ್ಲ. ಪತಿ ಊರ ಉಸಾಬರಿಯಲ್ಲೆಲ್ಲ ಮುಗಿಸಿ ಹೈರಾಣವಾಗಿ ಮನೆಗೆ ಬರುವವರೆಗೂ ಕಾಯುತ್ತಾರೆ. ಅವರಿಗೆ ರಾಜಕಾರಣದ ಸಿಟ್ಟು-ಗುಟ್ಟುಗಳು, ಅಸಮಾಧಾನ ಏನಿದ್ದರೂ ಇವರು ಮಾತ್ರ ಸಮಾಧಾನವಾಗಿಬೇಕು. ಪತಿಯ ವಿಶ್ವಾಸಿಗಳು, ವಿರೋಧಿಗಳು, ಹಿತೈಷಿಗಳು, ಹಿತಶತ್ರುಗಳು ಯಾರೇ ಸಿಕ್ಕರೂ ಅವರನ್ನು ವಿಶ್ವಾಸದಿಂದ ಮಾತನಾಡಿಸಬೇಕು. ಚುನಾವಣೆಗಳಲ್ಲಿ ಇರುಳು ಹಗಲೆನ್ನದೆ ಮನೆಯ ಹೊರೆಗೂ ಒಳಗೂ ದುಡಿಯಬೇಕು. ಜತೆಗೆ ಸಂಸಾರವನ್ನೂ ನಿರ್ವಹಿಸಬೇಕು. ಹೀಗೆ ವಿವಿಧ ಹೊಣೆಗಾರಿಕೆಯನ್ನು ಸೊಗಸಾಗಿ, ನಿರುಮ್ಮಳವಾಗಿ ನಿರ್ವಹಿಸಿದವರು ಲಲಿತಕ್ಕ. ತಾಳ್ಮೆಯ ಮಾತಿನಿಂದ ಅಕ್ಕ ಅನ್ನುವ ಯೋಗ್ಯತೆ ಮತ್ತು ಅರ್ಹತೆಗೆ ಪಾತ್ರರಾಗಿದ್ದಾರೆ ಎಂದು ಅವರು ಹೇಳಿದರು.

ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು

ರಾಯಚೂರಿನ ಕೃಷಿ ಸಾಧಕಿ ಡಾ. ಕವಿತಾ ಮಿಶ್ರಾ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಈ ಕುರಿತು ಮಹಿಳೆಯರು ಆಲೋಚಿಸಿ, ಪರಿಶ್ರಮ ಹಾಕಿ. ಬೇರೆಯವರೊಂದಿಗೆ ಹೊಲಿಕೆ ಮಾಡಿಕೊಳ್ಳಬೇಡಿ. ಬಂಗಾರ, ಸೀರೆ ಇನ್ನಿತರ ಅಲಂಕಾರಿಕ ವಸ್ತುಗಳ ಕುರಿತು ವ್ಯಾಮೋಹ ಬೇಡ. ಬೇರೆಯವರ ಬಗ್ಗೆ ಮಾತನಾಡಬೇಡಿ. ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸುವುದನ್ನು ಕಲಿಯಬೇಕು ಎಂದರು.

ಬದುಕಿನ ಹಿನ್ನೋಟವನ್ನು ಮೆಲುಕು ಹಾಕುತ ಭಾವುಕ

ಅಭಿನಂದನೆ ಸ್ವೀಕರಿಸಿ ಲಲಿತಾ ಜಿ.ಟಿ. ದೇವೇಗೌಡ ಅವರು ಮಾತನಾಡಿ, ಪತಿ ಜಿ.ಟಿ. ದೇವೇಗೌಡ ಮತ್ತು ತಮ್ಮ ಬದುಕಿನ ಹಿನ್ನೋಟವನ್ನು ಮೆಲುಕು ಹಾಕುತ ಭಾವುಕರಾದರು. ಇದೇ ವೇಳೆ ನೆನಪಿನ ಸುರಳಿ ಕಿರುಹೊತ್ತಿಗೆಯನ್ನು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಬಿಡುಗಡೆಗೊಳಿಸಿದರು.

ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದ, ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿ.ಟಿ. ದೇವೇಗೌಡ, ಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್, ವಿಧಾನಪರಿಷತ್ ಸದಸ್ಯ ಕೆ. ವಿವೇಕಾನಂದ, ಮುಡಾ ಮಾಜಿ ಅಧ್ಯಕ್ಷ ಹರದನಳ್ಳಿ ವಿಜಯ್, ಮದ್ದೂರು ಶಾಸಕ ತಮ್ಮಣ್ಣ ಪುತ್ರಿ ಡಾ. ಸೌಮ್ಯಾ, ಜಿ.ಟಿ. ದೇವೇಗೌಡರ ಕುಟುಂಬದವರು ಇದ್ದರು. ನಂತರ ನಿರುಪಮಾ- ರಾಜೇಂದ್ರ ತಂಡದಿಂದ ನೃತ್ಯ ಸಂಭ್ರಮ ವೈಭವ ಕಾರ್ಯಕ್ರಮವು ಜರುಗಿತು.ಪುತ್ರನ ನೆನೆದು ಜಿಟಿಡಿ ಬಾವುಕ:

ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಕೆಲಕಾಲ ಭಾವುಕರಾದರು.ನಗರದ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ಮಾತು ಆರಂಭಿಸುವ ಮುನ್ನವೇ ಗದ್ಗಿತರಾಗಿ ಕಣ್ಣೀರಿಟ್ಟರು. ಏನನ್ನೂ ನೆನೆದುಕೊಂಡು ಜಿ.ಟಿ. ದೇವೇಗೌಡರು ಬಿಕ್ಕಿ ಬಿಕ್ಕಿ ಅತ್ತರು, ಸಭಾಂಗಣದಲ್ಲಿ ನೆರೆದಿದ್ದವರ ಕಣ್ಣಂಚು ಒದ್ದೆಯಾಯಿತು. ಬೆಂಬಲಿಗರು ‘ಸದಾ ಕಾಲ ನಿಮ್ಮ ಜೊತೆಗಿರುತ್ತೇವೆ ವಿ ಅಣ್ಣಾ, ಅಳಬೇಡಿ’ ಎಂದು ಕೂಗಿದರು. ಸುಧಾರಿಸಿಕೊಂಡು ಮಾತನಾಡಿದ ಜಿ.ಟಿ. ದೇವೇಗೌಡರು, ನಾನು ಬಂಗಾರದ ಮನುಷ್ಯ ಸಿನೆಮಾ ನೋಡಿ ಅಳುತ್ತಿದ್ದೆ, ಅದರಿಂದ ಪ್ರೇರಣೆ ಪಡೆದು ಪ್ರಗತಿಪರ ಕೃಷಿಕನಾದೆ. ನನಗೆ 32 ವರ್ಷ ಇದ್ದಾಗ, ಲಲಿತಾಳಿಗೆ 16 ವರ್ಷ ಹೈಸ್ಕೂಲ್‌ ಓದುತ್ತಿದ್ದಳು. ದಲಿತ ಚೆಲುವಯ್ಯ ಹಾಗೂ ಲಿಂಗೇಗೌಡ ನನ್ನ ತಾಯಿಯ ಸೂಚನೆಯಂತೆ ಹುಡುಗಿ ನೋಡಿಕೊಂಡು ಬಂದಿದ್ದರು. ನಂತರ ಮದುವೆಯ ಬಳಿಕ ಅವಳು ಒಂದು ದಿನಾನು ಸುಖ ಪಟ್ಟಿಲ್ಲ ಎಂದು ಭಾವುಕರಾದರು.-ಕೋಟ್‌-

ನಾನು ಏನು ದೊಡ್ಡ ಸೇವೆ ಮಾಡಿಲ್ಲ. ಅಳಿಲು ಸೇವೆ ಮಾಡಿರುವೆ. ಇದಕ್ಕೆ ಅಪಾರವಾದ ಪ್ರೀತಿ ಗೌರವ ದೊರೆತಿದೆ. ಅದಕ್ಕೆ ನಾನು ಋಣಿ.

- ಲಲಿತಾ ಜಿ.ಟಿ. ದೇವೇಗೌಡ, ಜಿಪಂ ಮಾಜಿ ಅಧ್ಯಕ್ಷೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಖಾಲಿ ನಿವೇಶನ‌ದ ಕಸ ಸ್ವಚ್ಛಮಾಡದಿದ್ದರೆ 1 ಲಕ್ಷ ದಂಡ
ನಿನ್ನೆ 17 ಕಿ.ಮೀ ಫುಟ್ಪಾತ್ ಒತ್ತುವರಿ ತೆರವು