ಮೀಟರ್‌ ಬಳಸದ ಆಟೋ ಚಾಲಕರಿಗೆ ಎಚ್ಚರಿಕೆ

KannadaprabhaNewsNetwork |  
Published : Nov 09, 2024, 01:00 AM IST
ಪೊಟೋ: 8ಎಸ್ಎಂಜಿಕೆಪಿ08ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣ ಬಳಿ ಟ್ರಾಫಿಕ್‌ ಪೊಲೀಸರು ಆಟೋಗಳನ್ನು ತಡೆದು ಮೀಟರ್ ಪರಿಶೀಸಿದರು. | Kannada Prabha

ಸಾರಾಂಶ

ನಗರದಲ್ಲಿ ಮೀಟರ್‌ ಬಳಸದ ಆಟೋ ಚಾಲಕರ ವಿರುದ್ಧ ಪೊಲೀಸ್ ಇಲಾಖೆ ಶುಕ್ರವಾರದಿಂದ ಕಾರ್ಯಚರಣೆಗೆ ಇಳಿದಿದೆ. ನಗರದ ಹಲವಡೆ ಶುಕ್ರವಾರ ಆಟೋಗಳನ್ನು ತಡೆದು ಮೀಟರ್ ಪರಿಶೀಸಿದ ಪೊಲೀಸ್‌ ಅಧಿಕಾರಿಗಳು ಹಲವು ಆಟೋಗಳನ್ನು ಸೀಜ್‌ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದಲ್ಲಿ ಮೀಟರ್‌ ಬಳಸದ ಆಟೋ ಚಾಲಕರ ವಿರುದ್ಧ ಪೊಲೀಸ್ ಇಲಾಖೆ ಶುಕ್ರವಾರದಿಂದ ಕಾರ್ಯಚರಣೆಗೆ ಇಳಿದಿದೆ. ನಗರದ ಹಲವಡೆ ಶುಕ್ರವಾರ ಆಟೋಗಳನ್ನು ತಡೆದು ಮೀಟರ್ ಪರಿಶೀಸಿದ ಪೊಲೀಸ್‌ ಅಧಿಕಾರಿಗಳು ಹಲವು ಆಟೋಗಳನ್ನು ಸೀಜ್‌ ಮಾಡಿದ್ದಾರೆ.

ನಗರದ ಹಲವು ವರ್ಷಗಳಿಂದ ಆಟೋ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿದರೂ ಆಟೋ ಚಾಲಕರು ಅದೇಕೋ ಹಿಂದೇಟು ಹಾಕುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಕೆಲ ಆಟೋ ಚಾಲಕರು, ಮೀಟರ್ ಹಾಕದೆ ಪ್ರಯಾಣಿಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಸಾಮಾನ್ಯವಾಗಿ ಕೇಳಿ ಬರುತ್ತಲೇ ಇರುತ್ತವೆ.

2 ಅಥವಾ 3 ಕಿ.ಮೀ. ದೂರ ಪ್ರಮಾಣಕ್ಕೆ ನೂರಾರು ರುಪಾಯಿ ತೆರಬೇಕಾದ ಪರಿಸ್ಥಿತಿ ಇದೆ. ರಾತ್ರಿ ವೇಳೆ ಆಟೋ ದರ ಹಗಲಿಗಿಂತ ಕೊಂಚ ಹೆಚ್ಚಾಗಿಯೇ ಕೇಳುತ್ತಾರೆ. ಕೇಳಿದರೆ ಪೆಟ್ರೋಲ್‌, ಗ್ಯಾಸ್ ಬೆಲೆ ಏರಿಕೆ ನೆಪ ಹೇಳುತ್ತಾರೆ. ಮೀಟರ್‌ ಹಾಕಿ ಎಂದರೆ ಇನ್ನೂ ಜಾಸ್ತಿ ಆಗುತ್ತದೆ ಎಂದು ಹೇಳುತ್ತಾರೆ. ಹೀಗೆ ಪ್ರಯಾಣಿಕರಿಂದ ಮನಸೋ ಇಚ್ಚೆ ಬಾಡಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಹಲವರ ಆರೋಪವಾಗಿದೆ.

ನಗರದಲ್ಲಿ ಸಾವಿರಾರು ಆಟೋಗಳಿವೆ. ಅವುಗಳ ಪೈಕಿ ಮೀಟರ್‌ನಲ್ಲಿ ನಿಗದಿಪಡಿಸಿದ ದರದಂತೆ ಬಾಡಿಗೆ ಪಡೆಯದವರೇ ಹೆಚ್ಚು. ಬಹುತೇಕ ಆಟೋ ಚಾಲಕರು ಮೀಟರ್‌ ಅಳವಡಿಸಿಕೊಂಡಿಲ್ಲ. ಅಲ್ಲದೆ ಒಂದು ಆಟೋಗೂ ಇನ್ನೊಂದಕ್ಕೂ ಬಾಡಿಗೆ ದರದಲ್ಲಿ ತರಕಾರಿ ಬೆಲೆಯಂತೆ ವ್ಯತ್ಯಾಸ ಕಂಡುಬರುತ್ತಿದೆ. ಒಬ್ಬರು ಕನಿಷ್ಟ ₹50 ಎಂದರೆ ಇನ್ನೊಬ್ಬರು ₹60 ಎನ್ನುತ್ತಾರೆ. ಪ್ರಯಾಣಿಕರ ಮುಖ ನೋಡಿ ಬಾಡಿಗೆ ನಿಗದಿ ಮಾಡಲಾಗುತ್ತಿದೆ ಎಂಬುದು ಅನೇಕ ಪ್ರಯಾಣಿಕರ ಅಳಲು.

ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಎಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರಿಯಪ್ಪ , ಡಿವೈಎಸ್ಪಿ ಸುರೇಶ್ ಮಾರ್ಗದರ್ಶನದಲ್ಲಿ ಟ್ರಾಫಿಕ್ ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ಪೂರ್ವ ಹಾಗೂ ಪಶ್ಚಿಮ ಸಂಚಾರಿ ಠಾಣೆಗಳ ಪೊಲೀಸರು ವಿಶೇಷ ತಪಾಸಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಮೀಟರ್‌ ಹಾಕದ ಚಾಲಕರಿಗೆ ಪೊಲೀಸರಿಂದ ಗ್ರಿಲ್‌:

ಮೀಟರ್‌ ಅಳವಡಿಸದೇ ಹೆಚ್ಚಿನ ದರ ವಸೂಲಿ ಬಗ್ಗೆ ದೂರುಗಳು ಕೇಳಿದ ಬೆನ್ನಲ್ಲೆ ಟ್ರಾಫಿಕ್ ಪೊಲೀಸರು ನಗರದ ವಿವಿಧೆಡೆ ಶುಕ್ರವಾರ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿ ಮೀಟರ್‌ ಹಾಕದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದರು. ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋಗಳನ್ನು ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸಿದರು. ಈ ವೇಳೆ ಮೀಟರ್ ಹಾಕದೆ ಆಟೋ ಚಲಾಯಿಸುತ್ತಿದ್ದವರನ್ನು ಪತ್ತೆ ಹಚ್ಚಿದ್ದಾರೆ. ಐಎಂಎ ಕಾಯ್ದೆಯಡಿ 100 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಜತೆಗೆ 20 ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು