ಮಂಡ್ಯ/ಮದ್ದೂರು : ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಭಾನುವಾರ ಸಂಜೆ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ಒಂದು ಪೂರ್ವಯೋಜಿತ ಸಂಚಾಗಿರಬಹುದು ಎಂಬ ಸಂಶಯಗಳು ಮೂಡುತ್ತಿವೆ.
ಗಲಾಟೆ ಸಂಬಂಧ ಪೊಲೀಸರು ಈವರೆಗೆ 21 ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಆ ಪೈಕಿ ಮೂವರು ಚನ್ನಪಟ್ಟಣದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಅವರು ತಾವು ಹಬ್ಬದ ಊಟಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಹಬ್ಬದೂಟಕ್ಕೆ ಬಂದವರು, ಹಬ್ಬದೂಟ ಮಾಡಿ ಹೋಗುವ ಬದಲು, ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದೇಕೆ? ಎಂಬ ಪ್ರಶ್ನೆ ಈಗ ಕಾಡತೊಡಗಿದೆ.
ಅಲ್ಲದೆ, ವಿಚಾರಣೆ ವೇಳೆ ಇವರ ಹೇಳಿಕೆಗಳು ಅನುಮಾನ ಮೂಡಿಸುವಂತಿದೆ ಎಂದು ತಿಳಿದು ಬಂದಿದೆ. ಹೀಗಾಗಿ, ಗಲಭೆ ಎಬ್ಬಿಸುವ ಸಲುವಾಗಿಯೇ ಪಕ್ಕದ ಜಿಲ್ಲೆಯಿಂದ ಈ ಕಿಡಿಗೇಡಿಗಳು ಬಂದಿದ್ದರಾ ಎಂಬ ಸಂಶಯ ಕಾಡುತ್ತಿದೆ. ಸ್ಥಳೀಯರು ಕೂಡ ಇದೇ ಆರೋಪ ಮಾಡುತ್ತಿದ್ದಾರೆ.
ಅಲ್ಲದೆ, ಕಲ್ಲು ತೂರಾಟದ ವೇಳೆ ಸ್ಥಳದಲ್ಲಿ ಬೀದಿ ದೀಪವನ್ನು ಆರಿಸಲಾಗಿತ್ತು ಎಂದು ಪೊಲೀಸ್ ಮೂಲಗಳೇ ತಿಳಿಸಿವೆ. ಇದು ಕೂಡ ಸಂಶಯಕ್ಕೆ ಕಾರಣವಾಗಿದೆ. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕೇಸರಿ ಬಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ಯುವಕರ ಮೇಲೆ ಈ ಕತ್ತಲೆಯ ಭಾಗದಿಂದಲೇ ಕಲ್ಲುಗಳು ಏಕಾಏಕಿ ತೂರಿ ಬಂದಿವೆ. ಬಳಿಕ, ಕತ್ತಲೆಯಲ್ಲಿ ಪರಾರಿಯಾಗಲು ಇವರು ಯತ್ನಿಸಿದ್ದಾರೆ ಎನ್ನಲಾಗಿದೆ.
ಮದ್ದೂರು ಘಟನೆಗೆ ಕಾಂಗ್ರೆಸ್ ಸರಕಾರವೇ ಕಾರಣ: ಎಚ್ಡಿಕೆಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿ, ಹಿಂದೂ ಸಮುದಾಯಕ್ಕೆ ಅಸಮಾಧಾನ ಆಗುವ ರೀತಿ ಸರ್ಕಾರ ನಡೆದುಕೊಳ್ಳುತ್ತಿದೆ. ಮಂಡ್ಯ ಜಿಲ್ಲೆಗೆ ಬೆಂಕಿ ಹಾಕುವ ಕೆಲಸವನ್ನು ಕೆಲ ಶಕ್ತಿಗಳು ಮಾಡುತ್ತಿವೆ. ಜನರು ಅಂಥವರಿಗೆ ಅವಕಾಶ ಕೊಡಬಾರದು. ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತ, ನಡವಳಿಕೆಯಿಂದಲೇ ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ಎಸೆಯುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಇಂಥ ಕೆಟ್ಟ ಘಟನೆಗಳು ನಡೆಯಲು ಕಾಂಗ್ರೆಸ್ ಸರ್ಕಾರವೇ ಕಾರಣ. ಶಾಂತಿ ನೆಮ್ಮದಿಗೆ ಹೆಸರಾಗಿದ್ದ ಮಂಡ್ಯ ಜಿಲ್ಲೆಗೆ ಬೆಂಕಿ ಹಚ್ಚುವ ಕೆಲಸವಾಗುತ್ತಿದೆ.
ಹಿಂದೆಂದೂ ಈ ಜಿಲ್ಲೆಯಲ್ಲಿ ಇಂಥ ಘಟನೆಗಳು ಆಗಿಲ್ಲ. ನಾಗಮಂಗಲದಲ್ಲಿ ಕೆಲ ದುಷ್ಟಶಕ್ತಿಗಳು ಬೆಂಕಿ ಹಾಕುವ ಕೆಲಸ ಮಾಡಿದ್ದವು. ಈಗ ಮದ್ದೂರಿನಲ್ಲಿಯೂ ಅಂಥ ಶಕ್ತಿಗಳೇ ಜನರ ನೆಮ್ಮದಿ ಕೆಡಿಸುವ ಹುನ್ನಾರ ನಡೆಸಿವೆ ಎಂದು ಅವರು ಆಪಾದಿಸಿದರು.ನಿಖಿಲ್ ಭೇಟಿ:ಈ ಮಧ್ಯೆ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಸೋಮವಾರ ಮದ್ದೂರಿಗೆ ಭೇಟಿ ನೀಡಿ, ಬಿಜೆಪಿ-ಜೆಡಿಎಸ್ ಪ್ರತಿಭಟನೆಗೆ ಸಾಥ್ ನೀಡಿದರು. ಬಳಿಕ, ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.ಬಿಜೆಪಿಯಿಂದ ನೆಮ್ಮದಿ ಭಂಗ:ಸಿಎಂ
ರಾಜ್ಯದಲ್ಲಿ ಅಥವಾ ಸಮಾಜದಲ್ಲಿ ಏನಾದರೂ ನೆಮ್ಮದಿ ಕೆಡಿಸಿದ್ದರೆ ಅದು ಬಿಜೆಪಿಯವರು ಮಾತ್ರ. ಬಿಜೆಪಿಯವರು ಪ್ರಚೋದನೆ, ನೆಮ್ಮದಿ ಹಾಳು ಮಾಡುವುದರಲ್ಲಿ ನಿಸ್ಸೀಮರು. ಮದ್ದೂರು ಗಲಾಟೆ ವಿಚಾರದಲ್ಲಿ ಯಾರದ್ದೇ ತಪ್ಪಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮದ್ದೂರು ಗಲಾಟೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಗತ್ಯವಾಗಿ ಗುಂಪು ಸೇರುವುದು, ಗಲಾಟೆ ಮಾಡುವುದು, ಪ್ರತಿಭಟನೆ ಮೂಲಕ ಪ್ರಚೋದನೆ ನೀಡುವುದು ತಪ್ಪು. ಇದರ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರು ಹೋಗಿ ಪರಿಸ್ಥಿತಿ ಅವಲೋಕನ ಮಾಡಿ ಅವರ ವರದಿ ನೀಡುತ್ತಾರೆ. ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೋಮುವಾದದಿಂದ ಪಕ್ಷ ಕಟ್ಟುವುದು ರಾಜಕೀಯ ಪಕ್ಷದ ಕೆಲಸವಲ್ಲ. ಆದರೆ ಬಿಜೆಪಿಯವರು ಅದನ್ನು ಮಾಡುತ್ತಿದ್ದಾರೆ. ನನಗೆ ಇರುವ ಮಾಹಿತಿ ಪ್ರಕಾರ ಪೊಲೀಸರು ತಪ್ಪು ಮಾಡಿಲ್ಲ. ಒಂದು ವೇಳೆ ಪೊಲೀಸರೇ ಆಗಲಿ, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಯಾರೇ ಮಾಡಿದರೂ ತಪ್ಪು ತಪ್ಪೇ. ಹಿಂದೂ, ಮುಸ್ಲಿಂ ಯಾವುದೇ ಸಮುದಾಯದವರು ಮಾಡಿರಲಿ, ತಪ್ಪಿತಸ್ಥರ ಮೇಲೆ ಕಾನೂನು ರೀತಿ ಕ್ರಮ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.ಮಸೀದಿ ಮುಂದೆ ಮೆರವಣಿಗೆ ಹೋಗುವಾಗ ಸ್ವಲ್ಪ ಗಲಾಟೆ ಆಗಿದೆ. ಇಲ್ಲಿ ಜಾಸ್ತಿ ಹೊತ್ತು ನಿಲ್ಲಬೇಡಿ ಎಂದರೂ ಕೇಳಿಲ್ಲ. ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ್ದಾರೆ. ಹೀಗಾಗಿ ಲಘು ಲಾಠಿ ಪ್ರಹಾರ ಆಗಿದೆ. ಈ ಸಂಬಂಧ ಈಗಾಗಲೇ ಸುಮಾರು 21 ಮಂದಿ ಬಂಧನ ಆಗಿದೆ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ನೆಮ್ಮದಿಯಾಗಿ ಗಣೇಶ ಹಬ್ಬ ಆಚರಿಸಲಾಗುತ್ತಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬೇರೆ ಎಲ್ಲಾದರೂ ಗಲಾಟೆ ಆಗಿದೆಯೇ? ಸಮಾಜದಲ್ಲಿ ನೆಮ್ಮದಿ ಹಾಳಾದರೆ ಅದಕ್ಕೆ ಬಿಜೆಪಿಯವರೇ ಕಾರಣ. ಪ್ರಚೋದನೆ, ನೆಮ್ಮದಿ ಹಾಳು ಮಾಡುವುದರಲ್ಲಿ ಅವರು ನಿಸ್ಸೀಮರು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.ಸರ್ಕಾರ ಪತನದ ಹಾದಿಯಲ್ಲಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ, ಅವರ ಪಕ್ಷ ಪತನದ ಹಾದಿ ಹಿಡಿಯದಂತೆ ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಚಾಲ್ತಿಯಲ್ಲಿರಲು ಪ್ರತಾಪ್‌ಸಿಂಹ ಕೋರ್ಟಿಗೆ: ಸಿದ್ದು
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸದಂತೆ ಮಾಜಿ ಸಂಸದ ಪ್ರತಾಪ್‌ಸಿಂಹ ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರು ನಿಸಾರ್ ಅಹಮದ್ ಇದ್ದಾಗ ಯಾಕೆ ನ್ಯಾಯಾಲಯಕ್ಕೆ ಹೋಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಮಿರ್ಜಾ ಇಸ್ಮಾಯಿಲ್ ಮೆರವಣಿಗೆ, ಹೈದರ್ ಅಲಿ, ಟಿಪ್ಪು ಸುಲ್ತಾನ್ ಅವರು ದಸರಾ ಆಚರಣೆ ಮಾಡಿದಾಗ ಏನು ಮಾಡುತ್ತಿದ್ದರು? ಪ್ರತಾಪ್‌ಸಿಂಹ ಅವರು ಸ್ವಪಕ್ಷದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಚಾಲ್ತಿಯಲ್ಲಿರಲು ಈ ರೀತಿ ಮಾಡಿದ್ದಾರೆ ಎಂದರು.