ಕನ್ನಡಪ್ರಭ ವಾರ್ತೆ ವಿಜಯಪುರತಿಕೋಟಾ ತಾಲೂಕಿನ ಮಾನಾವರದೊಡ್ಡಿ ಬಳಿ ಮಂಗಳವಾರ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾನಾ ವಿಧಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಶೂಟೌಟ್‌ನಲ್ಲಿ ಮೃತಪಟ್ಟಿರುವ ಸತೀಶ ರಾಠೋಡ ಮತ್ತು ಹತ್ಯೆಯ ಆರೋಪಿಯಾಗಿರುವ ರಮೇಶ ಲಮಾಣಿ ಮಾರಕಾಸ್ತ್ರಗಳಿಂದ ಹೊಡೆದಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಘಟನೆಯಲ್ಲಿ ರಮೇಶ ಲಮಾಣಿ ಈಗ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ನಡೆದ ಘಟನಾ ಸ್ಥಳದಲ್ಲಿ ಸಿಕ್ಕಿದ್ದ ವ್ಯಕ್ತಿಯ ಕಿವಿ ಕೂಡ ರಮೇಶನದ್ದೇ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಇಬ್ಬರ ನಡುವೆ ಬಲವಾದ ಹೊಡೆದಾಟ ಆಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.ಮಗಳ ಫೋಟೋ ಹಾಕಿದ್ದಕ್ಕೆ ರೋಷ:ಗುಂಡಿನ ದಾಳಿಗೆ ಒಳಗಾಗಿ ಕೊಲೆಯಾಗಿರುವ ಸತೀಶ ರಾಠೋಡ, ಆರೋಪಿ ರಮೇಶ ಲಮಾಣಿಯ ಪುತ್ರಿಯನ್ನು ಇಷ್ಟಪಟ್ಟಿದ್ದ. ಆದರೆ, ಮನೆಯಲ್ಲಿ ಒಪ್ಪದ ಕಾರಣ ರಮೇಶನ ಪುತ್ರಿ 2024 ಜನವರಿ 28 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ದಿನವನ್ನು ತನ್ನ ಬ್ಲಾಕ್ ಡೇ ಎಂದು ಸತೀಶ ಆ ಯುವತಿಯ ಫೋಟೋವನ್ನು ಸ್ಟೇಟಸ್‌ನಲ್ಲಿ ಹಾಕಿದ್ದನಂತೆ. ಈ ವಿಚಾರ ಗೊತ್ತಾದ ರಮೇಶನು ತನ್ನ ಪುತ್ರಿಯನ್ನು ಕಳೆದುಕೊಂಡಿದ್ದ ಆವೇಶದಲ್ಲಿ ಸತೀಶನ ಮೇಲೆ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಸತೀಶನ ಮೇಲೆ ರಮೇಶ ಕಂಟ್ರಿ ಪಿಸ್ತೂಲ್ ಮೂಲಕ ಫೈರಿಂಗ್ ಮಾಡಿದ್ದಾನೆ. ಗುಂಡು ತಗುಲಿದ ಸತೀಶನಿಗೆ ಗಂಭೀರ ಗಾಯವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ, ಇಬ್ಬರ ನಡುವೆಯೂ ಮಾರಕಾಸ್ತ್ರಗಳಿಂದ ಹೊಡೆದಾಟ ಶುರುವಾಗಿದೆ ಎನ್ನಲಾಗಿದೆ. ಆಗ ಘಟನೆಯಲ್ಲಿ ಸತೀಶನೂ ಅಸುನೀಗಿದ್ದಾನೆ. ಇತ್ತ ರಮೇಶ ಲಮಾಣಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಮೃತ ಸತೀಶ ರಾಠೋಡನ ಸಹೋದರ ಸಚಿನ್ ರಾಠೋಡ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಆರೋಪಿ ರಮೇಶ ಲಮಾಣಿ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯಲ್ಲಿ ಸತೀಶ ರಾಠೋಡ ಮೃತಪಟ್ಟಿದ್ದರೆ, ಇತ್ತ ಕೊಲೆ ಆರೋಪಕ್ಕೆ ಒಳಗಾಗಿರುವ ಗಾಯಾಳು ರಮೇಶ ಲಮಾಣಿ ನಗರದ ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.------------ಕೋಟ್....ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದು ಹಾಗೂ ಇಬ್ಬರ ನಡುವೆ ಕಾದಾಟವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಯಲ್ಲಿ ಸತೀಶ ರಾಠೋಡ ಮೃತಪಟ್ಟಿದ್ದು, ರಮೇಶ ಲಮಾಣಿ ಪ್ರಜ್ಞಾಹೀನನಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ತನಿಖೆ ಮುಂದುವರೆದಿದೆ. ಇಬ್ಬರ ನಡುವೆ ಗಲಾಟೆ ನಡೆದಿತ್ತಾ ಅಥವಾ ಮತ್ಯಾರಾದರೂ ಇದರಲ್ಲಿ ಭಾಗಿಯಾಗಿದ್ದರಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ.- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ