ಕನ್ನಡಪ್ರಭ ವಾರ್ತೆ ರಾಮನಗರ
ನಗರ ವ್ಯಾಪ್ತಿಯ ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಸಹಕಾರಿ ಎಂದೇ ಹೇಳಲಾಗುತ್ತಿದ್ದ ಭಕ್ಷಿ ಕೆರೆಯ ಒಡಲಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ನಗರಸಭೆಯ ಕ್ರಮಕ್ಕೆ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಜಿಲ್ಲಾ ಕಚೇರಿಗಳ ಸಂಕೀರ್ಣದ ಹಿಂಭಾಗದಲ್ಲೇ ಭಕ್ಷಿ ಕೆರೆ ಇದೆ. ಕೊತ್ತಿಪುರ ಸರ್ವೇ ನಂ.1ರಲ್ಲಿ 25 ಎಕರೆ ವಿಸ್ತೀರ್ಣದಲ್ಲಿ ಕೆರೆ ಇದ್ದು, ನಗರದ ವಿನಾಯಕನಗರ, ಮಾರುತಿನಗರ ಹಾಗೂ ವಿಜಯನಗರ ಸೇರಿ ಸುತ್ತಮುತ್ತಲ ಪ್ರದೇಶಕ್ಕೆ ನೀರಿನ ಜಲಮೂಲವಾಗಿದೆ.
ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ 2022ರ ಆಗಸ್ಟ್ 27ರಂದು ಬೆಳ್ಳಂಬೆಳಿಗ್ಗೆ ಭಕ್ಷಿ ಕರೆಯ ಏರಿ ಒಡೆದು ನಗರದ ಮೂಲಕ ಹರಿದು ಹೋಗುವ ಸೀರಹಳ್ಳದಲ್ಲಿ ಪ್ರವಾಹ ಉಂಟಾಗಿತ್ತು. ಟಿಪ್ಪು ನಗರ ಸೇರಿ ಸುತ್ತಮುತ್ತಲ ಪ್ರದೇಶಗಳು ಜಲಾವೃತವಾಗಿದ್ದವು. ಆಗ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಶಾಸಕ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹೀಗೆ ಗಣ್ಯರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ತದನಂತರ ಸೀರಹಳ್ಳಕ್ಕೆ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಯಿತು. ಆದರೆ ಭಕ್ಷಿ ಕೆರೆಯ ಏರಿ ದುರಸ್ತಿಗೆ ಬಗ್ಗೆ ಈವರೆಗೆ ಯಾರೂ ಗಮನ ಹರಿಸಲಿಲ್ಲ.ಕೆರೆ ಅಂಗಳದ ಪಕ್ಕದ ಖಾಸಗಿ ವ್ಯಕ್ತಿಗಳ ಜಮೀನುಗಳಲ್ಲಿ ನಗರಸಭೆ ವತಿಯಿಂದ ಕಸ ವಿಲೇವಾರಿ ಆಗುತ್ತಿದೆ. ಆದರೆ ಈ ಸ್ಥಳ ಕೆರೆ ಅಂಗಳಕ್ಕೆ ನೀರುಣಿಸುವ ಪ್ರದೇಶವಾಗಿದ್ದು, ಮಳೆ ಸುರಿದರೆ ಜಮೀನಿನಲ್ಲಿ ಸುರಿದ ತ್ಯಾಜ್ಯ ಕೆರೆ ಅಂಗಳ ಸೇರಲಿದೆ ಎಂದು ಜೆಡಿಎಸ್ ನಗರ ಘಟಕ ಅಧ್ಯಕ್ಷ ಕುಮಾರ್ ಗೂಳಿಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಕೆರೆ ಅಂಗಳ ಸೇರಿ ಅಕ್ಕಪಕ್ಕ ಭೂಮಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬಾರದು ಎಂದು ಮನವಿ ಮಾಡಿದರೂ ನಗರಸಭೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದ್ದಾರೆ.ಭಕ್ಷಿ ಕೆರೆ ಏರಿಯನ್ನು ಪುನರ್ ನಿರ್ಮಾಣ ಮಾಡುವಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಾಗರಿಕರು, ಪರಿಸರವಾದಿಗಳು ನಗರಸಭೆ, ಜಿಲ್ಲಾಡಳಿತದ ಗಮನ ಸೆಳೆದಿದ್ದರೂ ಉಪಯೋಗವಾಗಲಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸೀರಹಳ್ಳಕ್ಕೆ ತಡೆಗೋಡೆ ನಿರ್ಮಿಸಲು ಲಕ್ಷಾಂತರ ರು.ಬಿಡುಗಡೆ ಮಾಡಿದ ಸರ್ಕಾರ, ಭಕ್ಷಿ ಕೆರೆ ಏರಿ ಪುನರ್ ನಿರ್ಮಾಣಕ್ಕೆ ಗಮನ ಹರಿಸಲಿಲ್ಲ. ಭಕ್ಷಿ ಕೆರೆ ಏರಿ ಪುನರ್ ನಿರ್ಮಾಣವಾಗದ ಕಾರಣ ಕಳೆದ ವರ್ಷ ಮಳೆಗಾಲದಲ್ಲಿ ಸುರಿದ ಮಳೆ ನೀರು ಸೀರಹಳ್ಳದ ಮೂಲಕ ಹರಿದು ಹೋಯಿತೇ ವಿನಃ ಕೆರೆಯಲ್ಲಿ ಶೇಖರಣೆಯಾಗಲಿಲ್ಲ. ಕೆರೆ ಖಾಲಿಯಾಗಿರುವ ನೆಪವನ್ನೇ ಇಟ್ಟುಕೊಂಡು ಸ್ಥಳೀಯ ನಗರಸಭೆ ಕೆರೆ ಪಾತ್ರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ ಎಂದು ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬೆನ್ನ ಹಿಂದೆಯೇ ಇರುವ ಕೆರೆಯ ಅಕ್ಕಪಕ್ಕ ತ್ಯಾಜ್ಯ ವಿಲೇವಾರಿ ಆಗುತ್ತಿರುವುದನ್ನು ಜಿಲ್ಲಾಧಿಕಾರಿಗಳು ಗಮನಿಸಲಿಲ್ಲವೇ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.‘ಭಕ್ಷಿ ಕೆರೆ ಅಂಗಳದಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಆದರೆ ಕೆರೆ ಪಕ್ಕದ ಖಾಸಗಿ ಜಮೀನಿನ ಪಕ್ಕದಲ್ಲಿ ತಾತ್ಕಾಲಿಕವಾಗಿ ಕಸ ವಿಲೇವಾರಿಯಾಗುತ್ತಿದೆ. ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಈಗಾಗಲೇ ಭೂಮಿಯನ್ನು ಗುರುತಿಸಲಾಗಿದೆ. ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಅಂತರ್ಜಲ ಕಾಯ್ದುಕೊಳ್ಳಲು ಭಕ್ಷಿ ಕೆರೆಯ ಕೊಡುಗೆ ಬಗ್ಗೆ ಅರಿವಿದೆ. ಲೋಕಸಭಾ ಚುನಾವಣೆಯ ನಂತರ ಭಕ್ಷಿ ಕೆರೆ ಏರಿ ಪುನರ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು.’
-ನಾಗೇಶ್, ಆಯುಕ್ತರು, ನಗರಸಭೆ, ರಾಮನಗರ