ಕನ್ನಡಪ್ರಭವಾರ್ತೆ ಪುತ್ತೂರು
ನಗರದ ಸ್ವಚ್ಛತೆ ವಿಚಾರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ಬಹುದೊಡ್ಡ ಸವಾಲಾಗಿದ್ದು, ಈ ನಿಟ್ಟಿನಲ್ಲಿ ಪೌರ ಕಾರ್ಮಿಕರ ಕೆಲಸವು ಮಾದರಿಯಾಗಿದೆ. ಸ್ವಚ್ಛತೆಗಾರರಾದ ಪೌರ ಕಾರ್ಮಿಕರ ಕ್ರಿಯಾಶೀಲತೆಯನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರತಿವರ್ಷ ಪೌರ ಕಾರ್ಮಿಕ ದಿನಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಪುತ್ತೂರು ನಗರಸಭೆ ವತಿಯಿಂದ ಮಂಗಳವಾರ ಇಲ್ಲಿನ ಪುರಭವನದಲ್ಲಿ ನಡೆದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.ಕಸ, ತ್ಯಾಜ್ಯ ನಿರ್ವಹಣೆ ಎಂಬುದು ಇಂದು ಜಗತ್ತಿಗೇ ಸವಾಲಾಗಿರುವ ವಿಚಾರವಾಗಿದೆ. ನಗರವನ್ನು ಪ್ರಾಮಾಣಿಕವಾಗಿ ಸ್ಚಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಬಹುದೊಡ್ಡ ಸೇವೆ ನೀಡುತ್ತಿರುವ ಪೌರ ಕಾರ್ಮಿಕರಿಗೆ ಸರ್ಕಾರ ವಿಶೇಷ ಗೌರವ ನೀಡುತ್ತಿದೆ ಎಂದರು. ಪುತ್ತೂರು ನಗರ ವ್ಯಾಪ್ತಿಯ ರಸ್ತೆಯೂ ಸೇರಿದಂತೆ ಪುತ್ತೂರು ತಾಲೂಕಿನ ಹದೆಗೆಟ್ಟ ರಸ್ತೆಗಳ ಅಭಿವೃದ್ಧಿ ಕಾರ್ಯ ಮುಂದಿನ ಒಂದು ವಾರದಲ್ಲಿ ಆರಂಭಗೊಳ್ಳಲಿದೆ. ನಗರಕ್ಕೆ ಸಂಬಂಧಿಸಿದಂತೆ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿರಬೇಕಾದುದು ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಆದರೆ ಬೆಂಗಳೂರಿಗೂ ಇಲ್ಲಿಗೂ ವ್ಯತ್ಯಾಸವಿದೆ. ದುಡ್ಡು ಮಾಡುವ ಯೋಜನೆ ನಮಗೆ ಬೇಡ ಎಂದು ತಾಕೀತು ಮಾಡಿದ್ದೇನೆ. ಒಳಚರಂಡಿ ಲೈನ್‌ನ್ನು ಕನಿಷ್ಠ ನಗರದ ಮುಖ್ಯ ರಸ್ತೆ ಬದಿಯಲ್ಲಾದರೂ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕೇಂದ್ರ ಮತ್ತು ರಾಜ್ಯದ ಅನುದಾನದಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 15 ಕೋಟಿ ರು. ಎನ್.ಜಿ.ಪಿ.ಯಿಂದ ಪುತ್ತೂರು ನಗರಸಭೆಗೆ ಮಂಜೂರುಗೊಂಡಿದೆ. ನಗರಸಭೆ ವ್ಯಾಪ್ತಿಯ ಪಾರ್ಕ್, ಕೆರೆಯ ಅಭಿವೃದ್ಧಿಗೆ 4 ಕೋಟಿ ಅನುದಾನ ಮಂಜೂರಾಗಿದೆ. ಪುತ್ತೂರಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕರು ತಿಳಿಸಿದರು.ಪ್ರಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಮಧು ಎಸ್. ಮನೋಹರ್ ಅವರು ಸ್ವಚ್ಛತಾ ಸೇನಾನಿಗಳಾದ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸರ್ಕಾರದ ನಿರ್ದೇಶನದಂತೆ ಪೌರ ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತಿದೆ. ಬನ್ನೂರಿನ ನೆಲಭರ್ತಿ ಪ್ರದೇಶದಲ್ಲಿ ಸುಮಾರು 15 ವರ್ಷಗಳಲ್ಲಿ 42 ಸಾವಿರ ಟನ್ ತ್ಯಾಜ್ಯ ಸಂಗ್ರಹಗೊಂಡಿದ್ದು, ಅದರ ತೆರವಿಗೆ ಜಿಲ್ಲಾಧಿಕಾರಿಯವರ ಅನುಮೋದನೆಯಾಗಿದೆ. ಜತೆಗೆ ಸಿಎನ್‌ಜಿ ಘಟಕವೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದ್ದು, ದೇಶದಲ್ಲೇ ಮಾದರಿ ನಗರವಾಗಿ ಪುತ್ತೂರು ಗುರುತಿಸಿಕೊಳ್ಳಲಿದೆ ಎಂದು ಹೇಳಿದರು. ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆ., ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಪೌರಕಾರ್ಮಿಕರು ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿರುವ ಗಾಂಧಿಕಟ್ಟೆಯಿಂದ ಪುರಭವನದ ತನಕ ಮೆರವಣಿಗೆಯಲ್ಲಿ ಸಾಗಿದರು. ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮೆರವಣಿಗೆಗೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಪೌರಕಾಮಿಕರು ಮತ್ತು ನಗರಸಭೆ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ನಗರಸಭೆಯ ಶೇ.24.1 ರಡಿಯಲ್ಲಿ ಪೌರ ಕಾರ್ಮಿಕ ನಿಧಿಯಲ್ಲಿ 51 ಮಂದಿ ಪೌರಕಾರ್ಮಿಕರಿಗೆ ಸೈಕಲ್, ಹೆಲ್ತ್ ಕಾರ್ಡ್ ವಿತರಿಸಲಾಯಿತು. ಒಟ್ಟು 77 ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಮಿಕರು ಮತ್ತು ಚಾಲಕರಿಗೆ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.