ಹೆಮ್ಮಾಡಿ ಜನತೆ ನಿದ್ದೆಗೆಡಿಸುತ್ತಿರುವ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು

KannadaprabhaNewsNetwork |  
Published : Jun 05, 2025, 01:58 AM IST
23 | Kannada Prabha

ಸಾರಾಂಶ

ಕೆಲ‌ ವರ್ಷಗಳ ಹಿಂದೆ ಹೆಮ್ಮಾಡಿಯ ಹೃದಯಭಾಗದಲ್ಲೇ‌ ನಿರ್ಮಾಣಗೊಂಡಿದ್ದ ಬಹುಮಹಡಿಯ ವಾಣಿಜ್ಯ ಸಂಕೀರ್ಣ ಇದೀಗ ಸ್ಥಳೀಯರ ನಿದ್ದೆಗೆಡಿಸುತ್ತಿದೆ‌‌. ಈ ಬಹುಮಹಡಿ ಕಟ್ಟಡದಿಂದ ಮಧ್ಯರಾತ್ರಿ ಹೊರಬರುವ ತ್ಯಾಜ್ಯ ನೀರು ಅಸಹನೀಯ ವಾತವರಣ ಸೃಷ್ಟಿಸುತ್ತಿರುವುದಲ್ಲದೆ, ಸ್ಥಳೀಯರು ಸಂಕಷ್ಟ ಎದುರಿಸುವಂತಾಗಿದೆ.

ಶ್ರೀಕಾಂತ ಹೆಮ್ಮಾಡಿ

ಕನ್ನಡಪ್ರಭ ವಾರ್ತೆ ಕುಂದಾಪುರಕೆಲ‌ ವರ್ಷಗಳ ಹಿಂದೆ ಹೆಮ್ಮಾಡಿಯ ಹೃದಯಭಾಗದಲ್ಲೇ‌ ನಿರ್ಮಾಣಗೊಂಡಿದ್ದ ಬಹುಮಹಡಿಯ ವಾಣಿಜ್ಯ ಸಂಕೀರ್ಣ ಇದೀಗ ಸ್ಥಳೀಯರ ನಿದ್ದೆಗೆಡಿಸುತ್ತಿದೆ‌‌. ಈ ಬಹುಮಹಡಿ ಕಟ್ಟಡದಿಂದ ಮಧ್ಯರಾತ್ರಿ ಹೊರಬರುವ ತ್ಯಾಜ್ಯ ನೀರು ಅಸಹನೀಯ ವಾತವರಣ ಸೃಷ್ಟಿಸುತ್ತಿರುವುದಲ್ಲದೆ, ಸ್ಥಳೀಯರು ಸಂಕಷ್ಟ ಎದುರಿಸುವಂತಾಗಿದೆ.ಹೆಮ್ಮಾಡಿಯ ಕೊಲ್ಲೂರು ಮುಖ್ಯರಸ್ತೆ ಮಗ್ಗುಲಲ್ಲೇ ತಲೆ ಎತ್ತಿರುವ ಬಹುಮಹಡಿ ವಾಣಿಜ್ಯ ಸಂಕೀರ್ಣದ ತ್ಯಾಜ್ಯ ನೀರು ಹೊರ ಬರುತ್ತಿರುವುದು ನಿನ್ನೆ ಮೊನ್ನೆಯಿಂದಲ್ಲ. ಮಳೆಗಾಲದ ರಾತ್ರಿ ಜೋರು ಮಳೆ‌ಬಂದಾಗ ಮಳೆನೀರಿನೊಂದಿಗೆ ಸಲೀಸಾಗಿ ತ್ಯಾಜ್ಯ ನೀರು ಬಿಡುವ ಕಟ್ಟಡ ಮಾಲಕರ ನಡೆಗೆ ಹಿಂದಿನಿಂದಲೂ ಸ್ಥಳೀಯರು ಅಪಸ್ವರ ಎತ್ತುತ್ತಲೇ ಬಂದಿದ್ದಾರೆ. ಈ ಬಗ್ಗೆ ಮೌಖಿಕವಾಗಿ ಸ್ಥಳೀಯಾಡದ ಗಮನಕ್ಕೂ ತಂದಿದ್ದಾರೆ. ಆದರೆ ಈವರೆಗೂ ಸಂಬಂಧಪಟ್ಟವರ ವಿರುದ್ದ ಕ್ರಮಕೈಗೊಳ್ಳದ ಪಂಚಾಯಿತಿ ನಡೆಗೆ ಭಟ್ರಬೆಟ್ಟು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅಭಿವೃದ್ಧಿ ಕಾಣದ ಭಟ್ರಬೆಟ್ಟು ರಸ್ತೆ:ಭಟ್ರಬೆಟ್ಟು ರಸ್ತೆ ಅವಲಂಬಿಸಿ ನೂರಾರು ಕುಟುಂಬಗಳಿವೆ. ಮಳೆಗಾಲ ಬಂತೆಂದರೆ ಈ ಭಾಗದ ನಿವಾಸಿಗಳ ಗೋಳು ಹೇಳತೀರದು. ರಾ.ಹೆದ್ದಾರಿ ಚತುಷ್ಪತ ಕಾಮಗಾರಿಯ ಬಳಿಕ ಭಟ್ರಬೆಟ್ಟು ರಸ್ತೆ ಎನ್ನುವುದು ಮಳೆಗಾಲದಲ್ಲಿ ತೋಡಾಗಿ ಪರಿವರ್ತನೆಗೊಳ್ಳುತ್ತದೆ‌. ಮಳೆಗಾಲದಲ್ಲಿ ಇಡೀ ಹೆಮ್ಮಾಡಿ ಪೇಟೆಯ ನೀರು ಇದೇ ರಸ್ತೆಯ ಮೂಲಕ ಸಾಗಿ ಕಟ್ಟು ನದಿ ಸೇರುತ್ತದೆ. ಹೆಚ್ಚು ಮಳೆ ಬಂದರೆ ಇಡೀ‌ ಪೇಟೆಯ ನೀರು ಮನೆ ಬಾಗಿಲ ತನಕ ಬರುವುದರಿಂದ ಮಳೆಗಾಲ ಎಂದರೆ ಇಲ್ಲಿನ ನಿವಾಸಿಗಳಗೆ ನರಕ ಯಾತನೆಯ ಬದುಕು.

ತ್ಯಾಜ್ಯ ನೀರಿನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯಾಡಳಿತಕ್ಕೆ ಸ್ಥಳೀಯ ನಿವಾಸಿ, ಕಾರ್ಮಿಕ ಮುಖಂಡ ಸಂತೋಷ್‌ ಹೆಮ್ಮಾಡಿ ಹದಿನೈದು ದಿನಗಳ ಹಿಂದಷ್ಟೇ ಮನವಿ ಸಲ್ಲಿಸಿದ್ದರು. ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ‌ ನೀಡಿದ ವೇಳೆ ಕಟ್ಟಡ ಮಾಲೀಕರು ತ್ಯಾಜ್ಯ ನೀರು ಹೊರಗಡೆ ಬಿಡಲಿಲ್ಲ. ಇದು ಕಿಡಿಗೇಡಿಗಳ ಷಡ್ಯಂತ್ರ ಎಂದು ಪತ್ರದ ಮೂಲಕ ಉತ್ತರ ನೀಡಿದ್ದಾರೆ ಎನ್ನಲಾಗಿದೆ‌.

ಮಂಗಳವಾರ ರಾತ್ರಿ ಎರಡು ಗಂಟೆಯ ಸುಮಾರಿಗೆ ಮಳೆ ಬಂದ ವೇಳೆ ಮತ್ತೆ ತ್ಯಾಜ್ಯ ನೀರು ಹೊರಬಿಡಲಾಗಿದೆ. ದಾಖಲೆಗಳ ಮೂಲಕ ಸೆರೆ ಹಿಡಿಯಬೇಕು ಎಂದು ಇಲ್ಲಿನ ಸ್ಥಳೀಯ‌ ಯುವಕರು ನಿದ್ದೆಗೆಟ್ಟು ಕಾದು ಕೂತಿದ್ದರಿಂದ ಕಟ್ಟಡ ಮಾಲೀಕರ ನಿಜ ಬಣ್ಣ ಬಯಲಾಗಿದೆ. ಕಟ್ಟಡದ ಆವರಣದಿಂದ ಪೈಪಿನ ಮೂಲಕ ಹೊರಬರುವ ತ್ಯಾಜ್ಯ ನೀರಿನ ಫೋಟೋ ಹಾಗೂ ವಿಡಿಯೋ ದೃಶ್ಯಾವಳಿಗಳನ್ನು ಸೆರೆ ಹಿಡಿದು ಸ್ಥಳೀಯಾಡಳಿತದ ಜನಪ್ರತಿನಿಧಿಗಳಿಗೆ ಯುವಕರು ಕಳುಹಿಸಿದಲ್ಲದೇ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.........................ಹೆಮ್ಮಾಡಿ ಪೇಟೆಯ ತುಂಬೆಲ್ಲಾ ದುರ್ನಾತ!

ತ್ಯಾಜ್ಯ ನೀರಿನಿಂದಾಗಿ ಪೇಟೆ ಗಬ್ಬು ನಾರುತ್ತಿದೆ. ಮಲಗಳ ತ್ಯಾಜ್ಯ, ಸ್ಯಾನಿಟರಿ ಪ್ಯಾಡ್''''''''ಗಳು, ಇನ್ನೂ ಅನೇಕ ತ್ಯಾಜ್ಯಗಳು ತೇಲಿ ಬರುತ್ತಿದ್ದು, ಊರಿಡೀ ಅಸಹನೀಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ...................

ಕಟ್ಟಡ ಮಾಲೀಕರ ವಿರುದ್ದ ಕ್ರಮಕೈಗೊಳ್ಳಲು ಈಗಾಗಲೇ ಪಂಚಾಯಿತಿಗೆ ಮನವಿ‌ ಸಲ್ಲಿಸಿದ್ದೇನೆ. ಕದ್ದುಮುಚ್ಚಿ ರಾತ್ರೋರಾತ್ರಿ ತ್ಯಾಜ್ಯ ನೀರು ಹೊರಬಿಡುತ್ತಿದ್ದಾರೆ. ತ್ಯಾಜ್ಯ ನೀರಿನಿಂದ ಮನೆಯ ಬಾವಿ ನೀರು ಕಲುಷಿತಗೊಳ್ಳುತ್ತಿದೆ. ಪಂಚಾಯಿತಿ ಕೂಡಲೇ ಕ್ರಮಕೈಗೊಳ್ಳದಿದ್ದರೆ ರಾ.ಹೆದ್ದಾರಿಗೆ ಸಮತಟ್ಟಾಗಿ ಮಣ್ಣು ಸುರಿದು ಯಾವ ನೀರು ನಮ್ಮ ರಸ್ತೆಗೆ ಬಾರದಂತೆ ತಡೆಯತ್ತೇವೆ.

-ಸಂತೋಷ್ ಹೆಮ್ಮಾಡಿ, ಸ್ಥಳೀಯ ನಿವಾಸಿ................

ಸ್ಥಳೀಯರ‌ ಮನವಿ ಮೇರೆಗೆ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಾರದ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಈ ಕುರಿತು ನಮ್ಮ ಕಟ್ಟಡದಿಂದ ಯಾವುದೇ ತ್ಯಾಜ್ಯ ಹೊರಗಡೆ ಬಿಡುತ್ತಿಲ್ಲ ಎಂದು ಕಟ್ಟಡದ ಮಾಲೀಕರು ಪತ್ರದ ಮೂಲಕ ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ತ್ಯಾಜ್ಯ ನೀರು ಹೊರಬಿಟ್ಟ ಬಗ್ಗೆ ವಿಡಿಯೋ ದಾಖಲೆ ಸಿಕ್ಕಿದೆ.

-ಜಯಮ್ಮ, ಕಾರ್ಯದರ್ಶಿ ಗ್ರಾಮ ಪಂಚಾಯಿತಿ ಹೆಮ್ಮಾಡಿ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...