ಕನ್ನಡಪ್ರಭ ವಾರ್ತೆ ಇಂಡಿ
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ತಾಲೂಕಿನ ಭೀಮಾ ನದಿ ದಂಡೆಯ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಇದ್ದು, ಅದಕ್ಕಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆಗೆ ಚರ್ಚೆ ಮಾಡಿ, ಭೀಮಾ ನದಿಗೆ ನೀರು ಬಿಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಕೃಷ್ಣಾ ಕಾಲುವೆಗೆ ಈಗಾಗಲೇ 1.5 ಟಿಎಂಸಿ ನೀರು ಹರಿಸುವುದಾಗಿ ಕಲಬುರಗಿ ಆಯುಕ್ತರು ತಿಳಿಸಿದ್ದರು. ಈ ಕೂಡಲೇ ನೀರು ಹರಿಸಬೇಕು, ಈ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದ ಅವರು, ರೈತರ ಹೋರಾಟದಿಂದ ಬೆಳೆದ ಜೆಡಿಎಸ್, ಇಂದೂ ರೈತರ ಪರವಾಗಿದೆ. ಬರ ಕುರಿತು ಕೇಂದ್ರ ಸರ್ಕಾರಕ್ಕೆ ರೈತರಿಗೆ ಆಗುವ ತೊಂದರೆಯನ್ನು ಕೇಂದ್ರ ಸಚಿವರಾದ ಕುಮಾರಣ್ಣನವರು ಮನವರಿಕೆ ಮಾಡಲಿದ್ದಾರೆ ಎಂದ ಅವರು, ಅಂತರ್ಜಲ ಸಂಪೂರ್ಣ ಬತ್ತಿದೆ. ಕುಡಿಯುವ ನೀರಿಗಾಗಿ ಟ್ಯಾಂಕರ್ ಮೂಲಕ ನೀರು ಮತ್ತು ತುರ್ತು ಬೋರ್‌ವೆಲ್ ಕೊರೆಸಲು ಪ್ರತಿ ತಾಲೂಕಿಗೆ ₹5 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಶಾಸಕ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು ಮಾತನಾಡಿ, ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ತೀವ್ರ ಬರಗಾಲ ಪರಿಸ್ಥಿತಿಯಿದೆ. ವಾಡಿಕೆಗಿಂತ ಸುಮಾರು ಶೇ.೪೦ಕ್ಕಿಂತಲೂ ಕಡಿಮೆ ಮಳೆಯಾಗಿದೆ. ಬಹಳಷ್ಟು ಕಡೆ ಬಿತ್ತನೆಯಾಗಿಲ್ಲ. ಅಲ್ಪಸ್ವಲ್ಪ ಬಿತ್ತನೆ ಮಾಡಿದ ಬೀಜ ಮಳೆ ಕೊರತೆಯಿಂದ ಮೇಲೆ ಎದ್ದಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ ಎಂದರು.
ಇದಕ್ಕೂ ಮೊದಲು ಇಂಡಿ ವಿಧಾನಸಭಾ ಕ್ಷೇತ್ರದ ಅಗಸನಾಳ, ಹೊರ್ತಿ, ಝಳಕಿ ಹಾಗೂ ಅಂಜುಟಗಿ ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ರೈತರ ಅಳಲನ್ನು ನಿಖಿಲ್ ಕುಮಾರಸ್ವಾಮಿ ಅವರು ಆಲಿಸಿ ಮನವಿ ಸ್ವೀಕರಿಸಿದರು.