₹25 ಕೋಟಿ ವಂಚನೆ: ಇಬ್ಬರ ಬಂಧನ

KannadaprabhaNewsNetwork |  
Published : Jul 15, 2026, 03:00 AM IST
ವಂಚನೆ ಪ್ರಕರಣ ಆರೋಪಿಗಳು | Kannada Prabha

ಸಾರಾಂಶ

ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ₹25 ಕೋಟಿಗೂ ಅಧಿಕ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ₹25 ಕೋಟಿಗೂ ಅಧಿಕ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ಈ ಮೂಲಕ ಬಂಧಿತರ ಸಂಖ್ಯೆ 2ಕ್ಕೆ ಏರಿದೆ. ಅಲ್ಲದೆ, ಪ್ರಮುಖ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದ ನಿವಾಸಿ ಸುಭೋದ ಹೊನ್ನಪ್ಪ ಕೂಗೆ (21) ಬಂಧಿತ ಪ್ರಮುಖ ಆರೋಪಿ. ಈತನನ್ನು ಜು.13ರಂದು ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮೊದಲು ಜೂ.18ರಂದು ಪ್ರಕರಣದ ಎರಡನೇ ಆರೋಪಿ, ಅಥಣಿ ತಾಲೂಕಿನ ಸತ್ತಿ ಗ್ರಾಮದ ಸರ್ಕಾರಿ ನೌಕರ ಪ್ರಮೋದ ಫಕೀರಪ್ಪ ಹಳೆಮನಿ (49) ಎಂಬಾತನನ್ನು ಬಂಧಿಸಿದ್ದರು. ನಂತರ ಪ್ರಮೋದನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಧಾರವಾಡದ ಕೇಶವನಗರ ನಿವಾಸಿ ಪ್ರವೀಣ ಚಂದ್ರಶೇಖರ ದೊಡ್ಡಮನಿ ಅವರು 2026, ಜೂನ್ 16ರಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಏನಿದು ವಂಚನೆ ಪ್ರಕರಣ?:

ಪ್ರಮುಖ ಆರೋಪಿ ಸುಭೋದ ಹೊನ್ನಪ್ಪ ಕೂಗೆ ಹಾಗೂ ಪ್ರಮೋದ ಫಕೀರಪ್ಪ ಹಳೆಮನಿ ಶ್ರೀದೇವಿ ಕೂಗೆ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದರಡಿ ಬಂಧಿತರು ಭಾರತೀಯ ರಿಸರ್ವ್ ಬ್ಯಾಂಕ್, ಸೆಬಿ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳ ಅನುಮತಿ ಪಡೆಯದೆ ಹೆಚ್ಚಿನ ಬಡ್ಡಿ ನೀಡುವುದಾಗಿ ಗ್ರಾಹಕರನ್ನು ನಂಬಿಸಿ, ಅಂದಾಜು ₹2.80 ಕೋಟಿ ಠೇವಣಿ ಪಡೆದು ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಬಡ್ಸ್ ಕಾಯ್ದೆ 2019, ಕೆಪಿಐಡಿ ಕಾಯ್ದೆ 2004 ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು. ಪೊಲೀಸರು ತನಿಖೆಯ ಜಾಡು ಹಿಡಿದು ಹೊರಟಾಗ ಎರಡನೇ ಆರೋಪಿ ಪ್ರಮೋದ ಹಳೆಮನಿ ಸಿಕ್ಕಿಬಿದ್ದಿದ್ದಾನೆ. ನಂತರ ಆತ ನೀಡಿದ ಮಾಹಿತಿ ಆಧಾರದ ಮೇಲಿಂದ ಪ್ರಮುಖ ಆರೋಪಿ ಸುಭೋದ ಕೂಗೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ತೀವ್ರ ತನಿಖೆ ನಡೆಸಿದಾಗ, ಆರೋಪಿಗಳು ಬೆಳಗಾವಿಯ ಶಿವಬಸವ ನಗರದಲ್ಲಿ ಶ್ರೀದೇವಿ ಕೂಗೆ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ 2025ರಿಂದ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ 254 ಮಂದಿಯಿಂದ ಒಟ್ಟು ₹25.79 ಕೋಟಿಗೂ ಅಧಿಕ ಹಣವನ್ನು ಹೂಡಿಕೆ ರೂಪದಲ್ಲಿ ಸಂಗ್ರಹಿಸಿದ್ದಾರೆ. ಮಾತ್ರವಲ್ಲ, ಹಣವನ್ನು ಮರಳಿಸದೇ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪ್ರಮುಖ ಆರೋಪಿ ಸುಭೋದ ಪ್ರಸ್ತುತ ಬೆಳಗಾವಿಯ ಮಹಾಂತೇಶನಗರದಲ್ಲಿ ವಾಸವಾಗಿದ್ದಾನೆ. ಆತನನ್ನು ಜುಲೈ 13ರಂದು ಬಂಧಿಸಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀದೇವಿ ಕೂಗೆ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿರುವ ಸಾರ್ವಜನಿಕರು ತಮ್ಮ ಬಳಿ ಇರುವ ದಾಖಲೆಗಳೊಂದಿಗೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ನೆರವಿಗೆ ಬಾರದೇ ಸಂಪುಟ ವಿಸ್ತರಣೆಯಲ್ಲಿ ಕಾಲಹರಣ: ನಿಖಿಲ್‌ ಕುಮಾರಸ್ವಾಮಿ
ಅಸ್ವಸ್ಥಗೊಂಡಿದ್ದ ಮಕ್ಕಳು ಗುಣಮುಖ