ಟಾಂಗಾ ಗಾಡಿಯಲ್ಲಿ ಆಟೋ ಎಳೆದು ಪ್ರತಿಭಟನೆ

KannadaprabhaNewsNetwork |  
Published : Apr 13, 2026, 01:15 AM IST
3 | Kannada Prabha

ಸಾರಾಂಶ

ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ ರಾಜ್ಯಾದ್ಯಂತ ಬಹುತೇಕ ಹೊಟೇಲ್ ಗಳು ಮುಚ್ಚಿವೆ. ಸಾವಿರಾರು ಜನರು ನೋವಿನಲ್ಲಿದ್ದಾರೆ.

----ಕನ್ನಡಪ್ರಭ ವಾರ್ತೆ ಮೈಸೂರು

ಎಲ್ ಪಿಜಿ ಆಟೋ ಗ್ಯಾಸ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ಭಾನುವಾರ ಟಾಂಗಾ ಗಾಡಿಯಲ್ಲಿ ಖಾಲಿ ಸಿಲಿಂಡರ್ ಗಳನ್ನು ಇರಿಸಿಕೊಂಡು ಆಟೋ ಎಳೆಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಟ್ರಿಪ್ ಮಾಡುವುದನ್ನು ಬಿಟ್ಟು, ಅಡುಗೆ ಅನಿಲ, ಆಟೋ ಗ್ಯಾಸ್ ಕೊರತೆಯಿಂದ ಬಳಲುತ್ತಿರುವ ಜನರ ಸಮಸ್ಯೆಗಳ ಕಡೆಯೂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ ರಾಜ್ಯಾದ್ಯಂತ ಬಹುತೇಕ ಹೊಟೇಲ್ ಗಳು ಮುಚ್ಚಿವೆ. ಸಾವಿರಾರು ಜನರು ನೋವಿನಲ್ಲಿದ್ದಾರೆ. ಕರ್ನಾಟಕದ ಹೊಟೇಲ್ ಮಾಲೀಕರು ನೋವಿನಲ್ಲಿದ್ದಾರೆ. ಕಾರ್ಮಿಕರಿಗೆ ಸಂಬಳ ಕೊಡಲು ಅವರಿಗೆ ಆಗುತ್ತಿಲ್ಲ. ಹೊಟೇಲ್ ಕಟ್ಟಡ ಬಾಡಿಗೆ ಕಟ್ಟಲು ಸಮಸ್ಯೆ ಆಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ 20 ಲಕ್ಷ ಆಟೋಗಳಿವೆ. ಆಟೋ ಚಾಲಕರು ಬಡವರಾಗಿದ್ದು, ಆಟೋ ಓಡಿಸಿದರೆ ಮಾತ್ರ ಅವರಿಗೆ ಊಟ, ಮಕ್ಕಳಿಗೆ ವಿದ್ಯಾಭ್ಯಾಸ. ‌ಇಂತಹ ಸ್ಥಿತಿ ಇರುವಾಗ ಅಮೆರಿಕಾ, ಇಸ್ರೇಲ್, ಇರಾನ್ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದಕ್ಕೆ ಪ್ರಪಂಚವೇ ನೋವಿನಲ್ಲಿದೆ. ಪ್ರಪಂಚದ ಆರ್ಥಿಕ ಪರಿಸ್ಥಿತಿ ಬಿದ್ದೋಗಿದೆ. ಅಮೆರಿಕಾದ ದರ್ಪ , ಪಾಳೇಗಾರಿಕೆಯಿಂದ ದೇಶದ ಪರಿಸ್ಥಿತಿ ಕೆಟ್ಟದಾಗಿದೆ. ಪ್ರಧಾನಿ ಮೋದಿ ಹಾಗೂ ವಿರೋಧ ಪಕ್ಷದ ನಿಯೋಗ 3 ದೇಶಗಳಿಗೆ ಭೇಟಿ ನೀಡಿ ಯುದ್ಧ ನಿಲ್ಲಿಸಿ ಎಂದು ಹೇಳಬೇಕಿತ್ತು.‌ ಪಾಕಿಸ್ತಾನದ ಶಾಂತಿ ಮಾತುಕತೆ ಮುರಿದು ಬಿದ್ದಿದೆ ಎಂದು ಆರೋಪಿಸಿದರು.

ಆಟೋ ಗ್ಯಾಸ್ ಸಮಸ್ಯೆಯಿಂದ ಆಟೋ ಚಾಲಕರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಟೋ ಚಾಲಕರಿಗೆ ತಲಾ 10 ಸಾವಿರ ಪರಿಹಾರ ಕೊಡಬೇಕು. ಸಮಸ್ಯೆ ಹೀಗೆ ಮುಂದುವರೆದರೆ ಒಂದು ವಾರದ ನಂತರ ಕರ್ನಾಟಕ್ ಬಂದ್ ಮಾಡಲು ಕರೆ ಕೊಡುವುದಾಗಿ ಅವರು ಎಚ್ಚರಿಸಿದರು.

ಸಮರ್ಪಕವಾಗಿ ಗ್ಯಾಸ್ ಪೂರೈಕೆಯಾಗದ ಹಿನ್ನೆಲೆ ಆಟೋಗಳು ರಸ್ತೆಗಿಳಿಯುತ್ತಿಲ್ಲ. ಇದರಿಂದ ಪ್ರಯಾಣಿಕರಿಗೂ ತೊಂದರೆ ಆಗಿದೆ ಎಂದು ಅವರು ದೂರಿದರು.

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರು ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಅವರು, ಇವರಿಗೆ ಜನರ ನೋವು ಬೇಕಿಲ್ಲ. ಮಂತ್ರಿ ಸ್ಥಾನ ಮಾತ್ರ ಬೇಕು. ಸಿದ್ದರಾಮಯ್ಯನವರೇ ಆಟೋ ಚಾಲಕರು, ಹೊಟೇಲ್ ನವರ ಕಡೆ ನೋಡಿ ಎಂದು ಆಗ್ರಹಿಸಿದರು.

ಕನ್ನಡ ಚಳವಳಿಗಾರರಾದ ಮೂಗೂರು ನಂಜುಂಡಸ್ವಾಮಿ, ಶಿವಶಂಕರ್ ಮೊದಲಾದವರು ಇದ್ದರು.

----

ಕೋಟ್...

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಟೋದವರು ಪೆಟ್ರೋಲ್ ಹಾಕಿಕೊಂಡು ಓಡಿಸಲಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ತಪ್ಪು. ಕೇಂದ್ರ ಸರ್ಕಾರ ಕೂಡಲೇ ಎಲ್‌ ಪಿಜಿ ಪೂರೈಸಬೇಕು. ರಾಜ್ಯದ ಬಿಜೆಪಿ ಸಂಸದರು ಮತ್ತು ನಾಯಕರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಎಲ್‌ ‌ಪಿಜಿ ಪೂರೈಕೆ ಮಾಡುವಂತೆ ಒತ್ತಾಯಿಸಬೇಕು. ಅದು ಸಾಧ್ಯವಾಗದಿದ್ದರೆ ಲ್ಲರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ.

- ವಾಟಾಳ್ ನಾಗರಾಜ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಚಂಡಿಕಾ ಹೋಮ
ಭಾರತದ ನರ್ಸಿಂಗ್‌ಗೆ ವಿಶ್ವಾದ್ಯಂತ ಬೇಡಿಕೆ: ದಿನೇಶ್‌