- ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರಾಥಮಿಕ ಹಂತದಲ್ಲಿ ಎಲ್ಲೆಲ್ಲಿ ಮೂಲಭೂತ ಸೌಕರ್ಯಗಳು ಲಭ್ಯವಿದಿಯೋ ಅಂತಹ 2-3 ಕೆರೆಗಳನ್ನು ಗುರುತಿಸಿ ಜಲ ಸಾಹಸ ಕ್ರೀಡೆಗಳನ್ನು ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಕೆರೆಗಳನ್ನು ಮಾತ್ರ ಈ ಯೋಜನೆಗೆ ಬಳಸಿಕೊಳ್ಳುವುದು ಅಗತ್ಯ. ಅನಂತರ ಯಾವ ಯಾವ ಕೆರೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅವಕಾಶವಿದೆಯೋ ಅಂತಹ ಕೆರೆಗಳನ್ನು ಮಾತ್ರ ಗುರುತಿಸಿಕೊಳ್ಳಬೇಕು. ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಪೂರಕವಾಗಿ ರಸ್ತೆ ಸೌಲಭ್ಯ, ಸ್ವಚ್ಛತೆ, ಸುರಕ್ಷತೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಅವಕಾಶವಿರುವ ಬಗ್ಗೆ ಗಮನ ಹರಿಸಬೇಕು ಎಂದರು. ಒಮ್ಮೆ ಜಲಸಾಹಸ ಕ್ರೀಡೆಗಳನ್ನು ಆರಂಭಿಸಿದ ನಂತರ ಕೆರೆಗಳಲ್ಲಿ ನೀರು ಬತ್ತಿಹೋಗುವಂತಹ ಪರಿಸ್ಥಿತಿ ಬರಬಾರದು. ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಸುತ್ತಮುತ್ತಲ ಕಡೆಗಳಲ್ಲಿರುವ ಬೃಹತ್ ಕೆರೆಗಳಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸುವ ಮುನ್ನ ಸಾಧಕ ಬಾಧಕಗಳನ್ನು ಪರಿಶೀಲಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಈ ಹಿನ್ನೆಲೆಯಲ್ಲಿ ಕೆರೆಗಳಲ್ಲಿ ನೀರಿನ ಲಭ್ಯತೆ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಪಡೆದ ಅನಂತರ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿದರು. ಇದಕ್ಕೂ ಮೊದಲು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್ ಹಾಗೂ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ದಕ್ಷಿಣಾಮೂರ್ತಿ ಮಾಹಿತಿ ನೀಡಿ, ಅಯ್ಯನಕೆರೆ, ಮದಗದ ಕೆರೆ, ವಿಷ್ಣು ಸಮುದ್ರ, ರಾಮೇಶ್ವರಕೆರೆ, ಹೇಮಗಿರಿಕೆರೆ, ಮಾಗಡಿ ಕೆರೆ, ಹಿರೇಕೊಳಲೆ ಕೆರೆ, ಬುಕ್ಕಾಂಬುಧಿ ಕೆರೆ, ಬೆಳವಾಡಿ ಕೆರೆ, ತರೀಕೆರೆ ದೊಡ್ಡಕೆರೆ ಹೀಗೆ ಆಯ್ದ ದೊಡ್ಡ ಕೆರೆಗಳ ವ್ಯಾಪ್ತಿಯಲ್ಲಿ ರಸ್ತೆ ವ್ಯವಸ್ಥೆ ಇದ್ದು, ಇತರ ಮೂಲ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಅವಕಾಶವಿರುವ ಬಗ್ಗೆ ಗಮನ ಸೆಳೆದರು. ಇಂಥ ಕೆರೆಗಳಲ್ಲಿ ಜಲಸಾಹಸ ಕ್ರೀಡೆ ಆರಂಭಿಸಬಹುದು ಎಂದು ಈಗಾಗಲೇ ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡಿದೆ ಎಂದರು.ಸಭೆಯಲ್ಲಿ ಪೌರಾಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಯುವ ಸಬಲೀಕರಣ, ಅರಣ್ಯ, ಕೈಗಾರಿಕಾ ಇಲಾಖೆ, ಮೆಸ್ಕಾಂ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 22 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು.