ನೀರು-ವಿದ್ಯುತ್‌ ರೈತರ ಅಗತ್ಯಗಳು: ಶಾಸಕ ಚಂದ್ರಪ್ಪ

KannadaprabhaNewsNetwork |  
Published : Aug 30, 2026, 01:15 AM IST
ಫೋಟೋ: ನುಲೇನೂರು ಗ್ರಾಮದಲ್ಲಿ ಒಂದು ಕೋಟಿ 90 ಲಕ್ಷ ರೂ.ಗಳ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶ್ರೀ ಪಂಡಿತಾರಾಧ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಾ.ಎಂ.ಚಂದ್ರಪ್ಪ. | Kannada Prabha

ಸಾರಾಂಶ

ನುಲೇನೂರು ಗ್ರಾಮದಲ್ಲಿ 1 ಕೋಟಿ 90 ಲಕ್ಷ ರು. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಪಂಡಿತಾರಾಧ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.

ಆರ್.ನುಲೇನೂರು ಗ್ರಾಮದಲ್ಲಿ 1.90 ಕೋಟಿ ರು. ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ನಮ್ಮ ರೈತರು ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ನೀರು ಮತ್ತು ವಿದ್ಯುತ್‌ ಬಯಸುತ್ತಾರೆ. ಅವುಗಳನ್ನು ಅವರಿಗೆ ಸಮರ್ಪಕವಾಗಿ ಒದಗಿಸುವ ಯತ್ನ ಮಾಡಬೇಕು ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ನುಲಿಯ ಚಂದಯ್ಯ ಜಯಂತಿಯಲ್ಲಿ ಪಾಲ್ಗೊಂಡು ನಂತರ ಆರ್.ನುಲೇನೂರು ಗ್ರಾಮದಲ್ಲಿ 1 ಕೋಟಿ 90 ಲಕ್ಷ ರು. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯದ ಬಹುತೇಕ ಕಡೆ ಈ ಬಾರಿ ಮಳೆ ಕಡಿಮೆಯಾಗಿ ಬರ ಆವರಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಈ ಸನ್ನಿವೇಶ ಗಮನಿಸಿ ಬರುವ ತಿಂಗಳಿನ ಒಳಗಾಗಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದರು.

ಈ ಬಾರಿ ರೈತರಿಗೆ ನೀರು, ವಿದ್ಯುತ್ ಕೊಡದಿದ್ದರೆ ರೈತರ ಯಾವ ತೋಟಗಳು ಉಳಿಯುವುದಿಲ್ಲ. ರೈತರ ವಿದ್ಯುತ್‌ ಸಮಸ್ಯೆ ಪರಿಹರಿಸಲು ಹನುಮಲಿ ಬಳಿ 25 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ತಾಲೂಕಿನಾದ್ಯಂತ 17 ಕಡೆ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಹಿರಿಯೂರಿನ ವಾಣಿ ವಿಲಾಸಾಗರದಿಂದ ಕ್ಷೇತ್ರದ ಬಹುತೇಕ ಭಾಗಗಳಿಗೆ ಶುದ್ಧ ನೀರು ನೀಡುವುದಕ್ಕಾಗಿ ೩೬೭ ಕೋಟಿ ರು. ಖರ್ಚು ಮಾಡಲಾಗಿದೆ ಎಂದರು.

ಹುಟ್ಟಿದ ಮೇಲೆ ಸಾವು ಯಾವಾಗ ಬರುತ್ತದೆನ್ನುವುದು ಗೊತ್ತಿಲ್ಲ. ಅದಕ್ಕಾಗಿ ಅಧಿಕಾರ ಇರುವಾಗ ಸಾರ್ವಜನಿಕರಿಗೆ ಏನು ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆನ್ನುವ ಆಲೋಚನೆಯಿಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದರು.

ಕ್ಷೇತ್ರಾದ್ಯಂತ ಶಾಲೆ, ಆಸ್ಪತ್ರೆ, ಸಿ.ಸಿ.ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ಚಾನಲ್ ಕೆಲಸ ನೆನೆಗುದಿಗೆ ಬಿದ್ದಿತ್ತು. ಸಾವಿರಾರು ರೈತರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಮನವೊಲಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಜೊತೆ ಮಾತನಾಡಿದ ಪರಿಣಾಮ ಸಮಸ್ಯೆ ಬಗೆಹರಿದಿದೆ. ಒಂದು ತಿಂಗಳೊಳಗೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸುತ್ತೇನೆಂದು ಹೇಳಿದರು.

ಹೊಸದುರ್ಗ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಶಾಸಕ ಎಂ.ಚಂದ್ರಪ್ಪ ಕ್ಷೇತ್ರದಾದ್ಯಂತ ಬಹಳ ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ಅವರಿಂದ ಹಲವು ಅಭಿವೃದ್ಧಿಯ ಕೆಲಸಗಳು ಆಗಿವೆ. ಜನಪ್ರತಿನಿಧಿಗಳು ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದರು.

ಲೋಕಸಭೆ ಮಾಜಿ ಸದಸ್ಯ ಜನಾರ್ಧನಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಷಣ್ಮುಖಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಕುಮಾರಣ್ಣ, ಭಾರತಿ ಕಲ್ಲೇಶ್, ಪಾರ್ವತಮ್ಮ ಸುರೇಶ್, ನುಲೇನೂರು ಶೇಖರ್ ಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಆರ್ಥಿಕ ಅಭಿವೃದ್ಧಿಗೆ ಧಗ್ರಾಯೋ ಸಹಕಾರಿ
ಪಡಿತರ ಅಕ್ಕಿ-ರಾಗಿ ಅಕ್ರಮ ಸಾಗಾಟ ಅಪಘಾತದಲ್ಲಿ ಬಯಲು!