ಕೌಶಲ್ಯ ತರಬೇತಿ ಕಾರ್ಯಕ್ರಮ । ನೀರು ವಿತರಣಾ ನಿರ್ವಾಹಕರ ಜಾಬ್‍ರೋಲ್ ಕುರಿತು ಮಾಹಿತಿ
ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳಲಾಗುತ್ತಿದ್ದು ಗ್ರಾಮ ಪಂಚಾಯಿತಿಗಳಲ್ಲಿ ನಲ್-ಜಲ್ ಮಿತ್ರ ಎನ್ನುವ ಕಾರ್ಯಕ್ರಮದ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆಗಳಲ್ಲಿ ಕೆಲಸ ನಿರ್ವಹಿಸಲು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಿಪಂ ಸಿಪಿಒ ಸಿ.ಎಸ್.ಗಾಯತ್ರಿ ಹೇಳಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಮಹಿಳೆ) ಸೋಮವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಎನ್‍ಆರ್‌ಎಲ್‍ಎಂ, ಜಿಟಿಟಿಸಿ, ಐಟಿಐ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ನಲ್-ಜಲ್ ಯೋಜನೆಯಡಿ ನೀರು ವಿತರಣಾ ನಿರ್ವಾಹಕರ ಜಾಬ್‍ರೋಲ್ ಕುರಿತು ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಜಲಜೀವನ್ ಮಿಷನ್ ಯೋಜನೆಯು ಗುರಿ ಹೊಂದಿದೆ. ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಪೂರ್ಣಗೊಳಿಸುವ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ನಲ್-ಜಲ್ ಯೋಜನೆಯಡಿ ನೀರು ವಿತರಣಾ ನಿರ್ವಾಹಕರಿಗೆ ಕೌಶಲ್ಯ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ. ಜಲಜೀವನ್ ಮಿಷನ್ ನೆಟ್‍ವರ್ಕ್ ವ್ಯವಸ್ಥೆ, ಪೈಪ್‍ಲೈನ್ ದುರಸ್ಥಿಯ ಚಾಕಚಕ್ಯತೆ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ನಲ್-ಜಲ್ ಮಿತ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇಮಣ್ಣ ಮಾತನಾಡಿ, ನಲ್-ಜಲ್ ಯೋಜನೆಯಡಿ ನೀರು ವಿತರಣಾ ನಿರ್ವಾಹಕ ಮಹಿಳಾ ಅಭ್ಯರ್ಥಿಗಳಿಗೆ 17 ದಿನಗಳ ಕಾಲ ಕೌಶಲ್ಯ ತರಬೇತಿ ನೀಡಲಾಗುವುದು. ನಂತರ 21 ದಿನಗಳ ಕಾಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುವುದು . ಕೌಶಲ್ಯ ತರಬೇತಿ ಬಹಳ ಮುಖ್ಯವಾಗಿದ್ದು, ಈಗಿನ ದಿನಮಾನಗಳಲ್ಲಿ ಕೌಶಲ್ಯ ಇಲ್ಲದೆ ನೌಕರಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿಟಿಟಿಸಿ ಪ್ರಾಂಶುಪಾಲ ಸುಹಾಸ್ ಮಾತನಾಡಿದರು. ಚಳ್ಳಕೆರೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಕೆ.ಟಿ.ಸತ್ಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.ಸರ್ಕಾರಿ ಕೈಗಾರಿಕಾ ತರಬೇತಿ (ಮಹಿಳಾ) ಸಂಸ್ಥೆಯ ಪ್ರಾಂಶುಪಾಲ ಬಿ.ಸುರೇಶ್, ಜಲಜೀವನ್ ಮಿಷನ್ ಕಾರ್ಯಕ್ರಮ ವ್ಯವಸ್ಥಾಪಕ ಯೋಗೇಶ್, ಮಂಜುನಾಥ್ ನಾಡರ್, ಮತ್ತಿತರರು ಇದ್ದರು.