ತಮಕೂರು-ಬೆ.ದಕ್ಷಿಣ ಜಿಲ್ಲೆ ರೈತರ ನಡುವೆ ನೀರಿನ ಸಂಘರ್ಷ!

KannadaprabhaNewsNetwork |  
Published : Jun 02, 2025, 12:14 AM IST

ಸಾರಾಂಶ

ರಾಮನಗರ: ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಯೋಜನೆ ಇದೀಗ ತುಮಕೂರು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.

ರಾಮನಗರ: ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಯೋಜನೆ ಇದೀಗ ತುಮಕೂರು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.

ತುಮಕೂರಿನ ಗುಬ್ಬಿಯ ಸಂಕಾಪುರದ ಕಾಮಗಾರಿ ಸ್ಥಳದಲ್ಲಿ ಜಿಲ್ಲಾಡಳಿತ ಹೇರಿದ್ದ ನಿಷೇಧಾಜ್ಞೆ ಉಲ್ಲಂಘಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಕಾಮಗಾರಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತರು ನಾವಾ ನೀವಾ ನೋಡಿಯೇ ಬಿಡೋಣ ಎಂದು ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ಒಂದರ್ಥದಲ್ಲಿ ಇದು ಸರ್ಕಾರದ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈತರಿಗೆ ಸವಾಲು ಹಾಕಿದಂತಿದೆ ಕಾಣುತ್ತಿದೆ.

ಅಷ್ಟಕ್ಕೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕನಸಿನ ಈ ಹೇಮಾವತಿ ಲಿಂಕಿಂಗ್ ಕೆನಾಲ್ ಯೋಜನೆಗೆ ವಿರೋಧ ಏಕೆ? ಏನಿದು ಯೋಜನೆ? ಯಾವಾಗ, ಯಾರ ಕಾಲದಲ್ಲಿ ಆದೇಶವಾಗಿದ್ದು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ನದಿ, ಗೊರೂರು ಜಲಾಶಯದಿಂದ ತುಮಕೂರು ಜಿಲ್ಲೆಗೆ ವರ್ಷಕ್ಕೆ 24 ಟಿಎಂಸಿ ನೀರು ಹಂಚಿಕೆ ಆಗಬೇಕು. ಆದರೆ, ಯಾವ ವರ್ಷವೂ 24 ಟಿಎಂಸಿ ನೀರು ಹಾಸನದಿಂದ ತುಮಕೂರಿಗೆ ಹರಿದೇ ಇಲ್ಲ. ಈ ಯೋಜನೆಯಡಿ ಗುಬ್ಬಿ ತಾಲೂಕಿನ ಸಂಕಾಪುರದಿಂದ ಪೈಪ್‌ಲೈನ್‌ನಲ್ಲಿ ಕುಣಿಗಲ್ ಮಾರ್ಗವಾಗಿ ಮಾಗಡಿಗೆ ನೀರು ಹರಿಸುವ ಯೋಜನೆ ಕಾರ್ಯಗತವಾಗುತ್ತಿದೆ. ಇದಕ್ಕೆ ತುಮಕೂರು ಜಿಲ್ಲೆಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ತುಮಕೂರು ರೈತರ ಆತಂಕ:

ಗುಬ್ಬಿ, ಕುಣಿಗಲ್ ತಾಲೂಕಿನಿಂದ ನೈಸರ್ಗಿಕವಾಗಿ ನಾಲೆಗಳ ಮೂಲಕವೇ ಮಾಗಡಿಗೆ ನೀರು ಹರಿಸಲಿ. ಅದನ್ನು ಬಿಟ್ಟು ದೊಡ್ಡ ಸ್ಟೀಲ್ ಪೈಪ್ ಬಳಸಿ ಕುಣಿಗಲ್ ಮೂಲಕ ಮಾಗಡಿಗೆ ನೀರು ಹರಿಸುವುದು ಬೇಡ. ಇದರಿಂದ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ನಿಂದ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಸಿಗದಂತೆ ಆಗುತ್ತದೆ ಎಂಬುದು ತುಮಕೂರು ರೈತರ ಆತಂಕವಾಗಿದೆ.

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಡಿ.ಕೆ.ಶಿವಕುಮಾರ್ ಕನಸಿನ ಯೋಜನೆಯಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ (2019) ಆದೇಶ ಮಾಡಲಾಗಿತ್ತು. ಇದಕ್ಕಾಗಿ 600 ಕೋಟಿ ರು. ಅನುದಾನ ಸಹ ಬಿಡುಗಡೆಯಾಗಿತ್ತು.

2023ರ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್, ನನೆಗುದಿಗೆ ಬಿದ್ದಿದ್ದ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್ ಕಾಮಗಾರಿಗೆ ಮರು ಜೀವ ಕೊಟ್ಟರು. ಇದರೊಂದಿಗೆ 450 ಕೋಟಿ ಇದ್ದ ಕಾಮಗಾರಿ ವೆಚ್ಚ 900 ಕೋಟಿಗೆ ಏರಿಕೆಯಾಯಿತು.

ತುಮಕೂರಿಗೆ 25.31 ಟಿಎಂಸಿ ನೀರು ಹಂಚಿಕೆ ಮಾಡಲು ನಿಗದಿಯಾಗಿತ್ತು. ಆದರೆ, ಸರಿಯಾದ ಪ್ರಮಾಣದಲ್ಲಿ ನೀರು ಹಂಚಿಕೆಯಾಗಿಲ್ಲ. ಜೊತೆಗೆ ಜಿಲ್ಲೆಯ ಟೇಲ್ ಎಂಡ್‌ನಲ್ಲಿರುವ ಕುಣಿಗಲ್‌ಗೆ ನೀರು ಇಲ್ಲದಂತಾಗಿತ್ತು. ಕುಣಿಗಲ್ ಗೆ ಅಗತ್ಯವಾದದ್ದು 3 ಟಿಎಂಸಿ ನೀರು. ಹೀಗಾಗಿ ಕುಣಿಗಲ್ ಗೆ ಅಗತ್ಯ ನೀರು ಸಂಪರ್ಕ ಕಲ್ಪಿಸಲು ಈ ಎಕ್ಸ್ ಪ್ರೆಸ್ ಲಿಂಕಿಂಗ್ ಕೊನಾಲ್ ಯೋಜನೆ ತರಲಾಯಿತು.

ಲಿಂಕ್ ಕೆನಾಲ್ ಯೋಜನೆಗೆ ಮರು ಜೀವ:

ಲಿಂಕ್ ಕೆನಾಲ್ ಮುಖಾಂತರ ಕುಣಿಗಲ್ ಗೆ ಪೈಪ್​ ಲೇನ್ ನಲ್ಲಿ ನೀರು ಬಿಡುವ ಯೋಜನೆ ಇದ್ದಾಗಿದ್ದು, ಗುಬ್ಬಿಯ ಸಂಕಾಪುರದಿಂದ ಆರಂಭವಾಗುತ್ತದೆ. ಕುಣಿಗಲ್ ಕೆರೆಗೆ ತಲುಪಲು ಸಿದ್ಧಗೊಂಡ ಯೋಜನೆ ಇದಾಗಿದೆ.

ಈ ಯೋಜನೆಗೆ ಮರುಜೀವ ಸಿಗುತ್ತಿದ್ದಂತೆಯೇ ತುಮಕೂರು ಭಾಗದಲ್ಲಿ ವಿರೋಧ ವ್ಯಕ್ತವಾಯಿತು. ಒಂದೆಡೆ ಶ್ರೀರಂಗ ಯೋಜನೆ ಪೂರ್ಣವಾಗುವ ಹಂತದಲ್ಲಿದ್ದರೆ ಮತ್ತೊಂದೆಡೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಪ ಬಳಿಯ ಡಿ ರಾಂಪುರ ಸಮೀಪ ಲಿಂಕ್ ಕೆನಾಲ್ ಕಾಮಗಾರಿ ಶುರುವಾಯಿತು. ಇದರಿಂದಾಗಿ ನಮಗೆ ಹಂಚಿಕೆಯಾಗಿರುವ ನೀರೇ ಪೂರ್ಣ ಪ್ರಮಾಣದಲ್ಲಿ ತಲುಪುತ್ತಿಲ್ಲ. ಹೀಗಿರುವಾಗ ಎಕ್ಸ್ ಪ್ರೆಸ್​ ಕೆನಾಲ್ ಯೋಜನೆ ಮೂಲಕ ನಮ್ಮ ಪಾಲಿನ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗುತ್ತದೆ ಎಂಬ ಕೂಗು ಎದ್ದಿದೆ.

-------------------------------

ಬಾಕ್ಸ್ ...............

ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ಹೇಮಾವತಿ ನಾಲಾ ವಲಯ ಮತ್ತು ತುಮಕೂರಿಗೆ ಒಟ್ಟು 25.31 ಟಿಎಂಸಿ ನೀರು ನಿಗದಿಯಾಗಿದೆ. ಅದರಂತೆ ನಾಲಾ ವಲಯದಲ್ಲಿರುವ ಹಾಸನ, ಮಂಡ್ಯ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳ 14 ತಾಲೂಕುಗಳಿಗೆ ನೀರು ಹಂಚಿಕೆಯಾಯಾಗಿದೆ. ಇದರಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ 66 ಕೆರೆಗಳಿಗೆ ನೀರು ತುಂಬಿಸುವುದು ಸಹ ಸೇರಿದೆ.

2016ರಲ್ಲಿ ಶಂಕುಸ್ಥಾಪನೆ: ಜಲಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ವತಿಯಿಂದ ಕುಣಿಗಲ್ ತಾಲೂಕಿನಲ್ಲಿ ಹುತ್ರಿದುರ್ಗ ಹೋಬಳಿ ಹಾಗೂ ಮಾಗಡಿ ತಾಲೂಕು ಒಳಗೊಂಡಂತೆ 83 ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ 327 ಕೋಟಿ ಮೊತ್ತದ ಶ್ರೀರಂಗ ಏತ ನೀರಾವತಿ ಯೋಜನೆಗೆ 2016ರಲ್ಲಿ ಚಾಲನೆ ಸಿಕಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ