ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಗದಗಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುವ ಮಾರ್ಗವೇ ಕಾಣುತ್ತಿಲ್ಲ. ಹಲವಾರು ದಶಕಗಳಿಂದಲೂ ನೀರಿನ ಸಮಸ್ಯೆ ನೀಗಿಲ್ಲ. ಪ್ರಸಕ್ತ ಸಾಲಿನ ಬೇಸಿಗೆ ಪೂರ್ವದಲ್ಲಿಯೇ ಅವಳಿ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು ಜನರು ಆತಂಕ ಪಡುತ್ತಿದ್ದಾರೆ.ಕಳೆದ ಕೆಲವು ದಿನಗಳಿಂದ ಖಾನತೋಟ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ 20 ದಿನಗಳಾದರೂ ನೀರು ಪೂರೈಕೆಯಾಗಿಲ್ಲ. ಈ ಭಾಗದಲ್ಲಿನ ಕೊಳವೆ ಬಾವಿಗಳು ಕೂಡಾ ದುರಸ್ತಿಯಲ್ಲಿರುವ ಹಿನ್ನೆಲೆಯಲ್ಲಿ ಜನರು ಕುಡಿಯುವ ನೀರಿನ ಜತೆಗೆ ಬಳಕೆ ನೀರಿಗೂ ಪರದಾಡುವಂತಾಗಿದೆ.ಬಡವರಿಗೆ ತೊಂದರೆ: ಗದಗ ನಗರದ ಖಾನತೋಟದ ಜನತಾ ಕಾಲೋನಿ ಭಾಗದಲ್ಲಿ 6ರಿಂದ 8 ಸಾವಿರ ಜನರು ವಾಸ ಮಾಡುತ್ತಾರೆ. ಪ್ರತಿನಿತ್ಯ ಕೆಲಸವನ್ನು ಮಾಡಿದರೆ ಇವರ ಹೊಟ್ಟೆ ತುಂಬುತ್ತದೆ. ಆದರೆ ನೀರು ಸರಿಯಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ನೀರು ಸಂಗ್ರಹಿಸುವುದಕ್ಕಾಗಿಯೇ ಉದ್ಯೋಗ ಬಿಟ್ಟು ಮನೆಯಲ್ಲಿ ಕುಳಿತು ಕೊಳ್ಳುವಂತಾಗಿದೆ. ಇನ್ನು ಉಳ್ಳವರು ಟ್ಯಾಂಕರ್ ಮೂಲಕ ನೀರಿನ ಅಗತ್ಯವನ್ನು ಪೂರೈಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಬಡವರ ನೋವಿನ ಮಾತಾಗಿದೆ.ಸಚಿವರ ಮಾತಿಗೂ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಜನರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಖಡಕ್ ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಅವರ ಖಡಕ್ ಸೂಚನೆಯನ್ನು ಹಗುರವಾಗಿ ಪರಿಗಣಿಸಿದಂತೆ ಕಾಣುತ್ತಿದ್ದು, ಇನ್ನು ಬೇಸಿಗೆ ಆರಂಭದಲ್ಲಿಯೇ ಜನರಿಗೆ ಕುಡಿಯಲು ನೀರಿಲ್ಲ, ಬಳಕೆ ಮಾಡಲು ನೀರಿಲ್ಲದಂತಹ ಸ್ಥಿತಿ ನಿರ್ಮಾಣವಾದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.
ಗದಗ-ಬೆಟಗೇರಿ ನಗರಸಭೆಯಲ್ಲಿ ಚುನಾಯಿತ ಸದಸ್ಯರಿದ್ದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಪ್ರಕರಣ ನ್ಯಾಯಾಲಯದಲ್ಲಿದ್ದು, ಸದ್ಯಕ್ಕೆ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದಾರೆ. ಹಾಗಾಗಿ ಚುನಾಯಿತ ಪ್ರತಿನಿಧಿಗಳು ಕೂಡಾ ತಮ್ಮ ವಾರ್ಡಗಳಲ್ಲಿ ಉಂಟಾಗುತ್ತಿರುವ ಕುಡಿವ ನೀರಿನ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಾಗದೇ ಅಸಹಾಯಕರಾಗಿ ಕುಳಿತುಕೊಳ್ಳುವಂತಾಗಿದೆ.ಈ ಕಾಲೋನಿಯಲ್ಲಿ ಮೂರು ಕೊಳವೆಬಾವಿ ಇವೆ. ಅವುಗಳು ಕಳೆದ ಹಲವು ತಿಂಗಳಿಂದ ಕೆಟ್ಟು ನಿಂತಿವೆ. ಅವುಗಳನ್ನು ದುರಸ್ತಿ ಮಾಡಿಸಿ ಎಂದು ನಗರಸಭೆ ಸದಸ್ಯರು ಅಧಿಕಾರಿಗಳಿಗೆ ಹೇಳಿದರೆ ಯಾರೂ ಗಮನ ನೀಡುತ್ತಿಲ್ಲ, ಹೀಗಾಗಿ ನೀರು ಇಲ್ಲದೆ ಓಣಿ ಓಣಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ನಿವಾಸಿಗಳಾದ ರತ್ನಾ, ಮಂಜುನಾಥ ಹೇಳಿದರು.