-ಹರಿಹರದ ಕೆಎಚ್‌ಬಿ ಕಾಲೋನಿಯಲ್ಲಿ ವಾರದಿಂದ ನೀರು ಸರಬರಾಜು ಸ್ಥಗಿತ
ಕನ್ನಡಪ್ರಭವಾರ್ತೆ ಹರಿಹರ
ಕೆಎಚ್‍ಬಿ ಕಾಲೋನಿ ನಿವಾಸಿಗಳ ಮನೆಗಳಿಗೆ ಕಳೆದ ಒಂದು ವಾರದಿಂದ ನೀರು ಸರಬರಾಜು ಆಗುತ್ತಿಲ್ಲ ಎಂದು ವಾರ್ಡ್ ಸದಸ್ಯ ದಿನೇಶ್ ಬಾಬು ನೇತೃತ್ವದಲ್ಲಿ ನಗರಸಭೆಗೆ ತೆರಳಿ ಕೆಎಚ್‍ಬಿ ಕಾಲೋನಿಗೆ ನೀರು ಸ್ಥಗಿತಗೊಂಡದ್ದರಿಂದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.ಬೆಳಿಗ್ಗೆ ಜಲಸಿರಿ 24*7 ಯೋಜನೆಯಡಿ ನೀರಿನ ಕಂದಾಯ ಕಟ್ಟಿಸಿಕೊಳ್ಳುವ ಸ್ಥಳಕ್ಕೆ ತೆರಳಿ ಆಕ್ರೋಶ ವ್ಯಕ್ತ ಪಡಿಸಿದಾಗ ಅಲ್ಲಿನ ಸಿಬ್ಬಂದಿ ಇಲ್ಲಿ ಕಂದಾಯ ಮಾತ್ರ ಕಟ್ಟಿಸಿಕೊಳ್ಳುವುದು. ನೀರು ಬರದಿದ್ದಲ್ಲಿ ಸಂಬಂಧಿಸಿದ ಇಂಜಿನಿಯರ್ ಅವರನ್ನು ಸಂಪರ್ಕಿಸಲು ಹೇಳಿದಾಗ ಆಕ್ರೋಶ ವ್ಯಕ್ತ ಪಡಿಸಿದ ಕೆಎಚ್‍ಬಿ ನಿವಾಸಿಗಳು ಇಂಜಿನಿಯರ್ ಬರುವವರೆಗೆ ಕರ ವಸೂಲಿ ಕೇಂದ್ರ ಬಂದ್ ಮಾಡುವಂತೆ ಪಟ್ಟು ಹಿಡಿದು ಪ್ರತಿಭಟಿಸಲು ಮುಂದಾದರು.
ಈ ವೇಳೆ ಮಾತನಾಡಿದ ನಿವಾಸಿಗಳು ಕಳೆದೊಂದು ವಾರದಿಂದ ಕೆಎಚ್‍ಬಿ ಕಾಲೋನಿಗೆ ಕುಡಿಯುವ ನೀರು ಬರುತ್ತಿಲ್ಲ. ಈಗಾಗಲೆ ಜಲಸಿರಿ ಯೋಜನೆಯ ಪೈಪ್ ಅಳವಡಿಸಲಾಗಿದೆ. ಆದರೆ ಇದುವರೆಗೆ ನಳದ ಸಂಪರ್ಕ ನೀಡಿಲ್ಲ. ಹಾಗೂ ಮೀಟರ್ ಅಳವಡಿಸಿಲ್ಲ ಈ ಹಿಂದೆ ಅಳವಡಿಸಲಾಗಿದ್ದ ಹಳೆ ಪೈಪ್‍ನಲ್ಲಿ ನೀರು ಬಿಡುತ್ತಿದ್ದಾರೆ. ಅದೂ ಈಗ ಸ್ಥಗಿತವಾಗಿದೆ ಎಂದು ದೂರಿದರು.
ಉಪಾಧ್ಯಕ್ಷ ಎಂ ಜಂಬಣ್ಣ ಮಾತನಾಡಿ, ಕಳೆದೊಂದು ವಾರದಿಂದ ನೀರು ಬಾರದಿದ್ದರೆ ಜನರು ಹೇಗೆ ಸಂಭಾಳಿಸಬೇಕು ಎಂದು ಇಂಜಿನಿಯರ್‍ಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಒಂದು ಗಂಟೆ ಒಳಗೆ ಆ ಭಾಗದ ಜನರಿಗೆ ನೀರು ಒದಗಿಸಬೇಕು ತಪ್ಪಿದಲ್ಲಿ ತಮ್ಮ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ ಲಾಗುವುದು, ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಜಲಸಿರಿ ಇಂಜಿನಿಯರ್ ನಳಿನ್ ಕುಮಾರ್ ಮಾತನಾಡಿ, ನದಿಯಿಂದ ನೀರೆತ್ತುವ ಪಂಪ್ ಒಂದೆ ಇದೆ. ಅಲ್ಲದೆ ವಿದ್ಯುತ್ ಸರಬರಾಜಿನ ಸಮಸ್ಯೆ ಇದೆ. ಹೆಚ್ಚುವರಿ ವಿದ್ಯುತ್ ನೀಡಲು ಈಗಾಗಲೇ ರಾಣೆಬೆನ್ನೂರು ವಿದ್ಯುತ್ ಇಲಾಖೆಗೆ ಮನವಿ ಮಾಡಲಾಗಿದೆ. ಸಂಬಂಧಿಸಿದ ಇಂಜಿನಿಯರ್ ಸರ್ವೆ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಳವಡಿಸಲಿದ್ದಾರೆ ಎಂದರು.-----
ಹರಿಹರದ ಕೆಎಚ್‌ಬಿ ಕಾಲೋನಿಯಲ್ಲಿ ಕಳೆದೊಂದು ವಾರದಿಂದ ನೀರು ಸರಬರಾಜು ಸ್ಥಗಿತವಾಗಿದೆ ಎಂದು ಸ್ಥಳೀಯ ನಿವಾಸಿಗಳು ನಗರಸಭೆಗೆ ತೆರಳಿ ಆಕ್ರೋಶ ವ್ಯಕ್ತ ಪಡಿಸಿದರು.