ಸೂರ್ಯ, ಚಂದ್ರ, ಗಾಳಿ ಸಂಪರ್ಕವಿಲ್ಲದ ನೀರು ಬಳಕೆಗೆ ಅಯೋಗ್ಯ: ರಾಘವೇಶ್ವರ ಭಾರತೀ ಸ್ವಾಮೀಜಿ

KannadaprabhaNewsNetwork |  
Published : Sep 10, 2026, 02:15 AM IST
ಸ್ವರ್ಣಪಾದುಕಾಪೂಜೆ ನೆರವೇರಿಸಿದ ಭೋವಿ ಸಮಾಜದವರು ಶ್ರೀಗಳಿಂದ ಆರ್ಶೀವಾದ ಪಡೆಯುತ್ತಿರುವುದು  | Kannada Prabha

ಸಾರಾಂಶ

ಸೂರ್ಯ, ಚಂದ್ರ ಹಾಗೂ ಗಾಳಿಯ ಸಂಪರ್ಕ ಇಲ್ಲದ ನೀರನ್ನೇ ನಾವು ಬಳಸುತ್ತಿದ್ದೇವೆ. ಸೂರ್ಯನ ಬೆಳಕು ಬೀಳದಂತೆ ಸಿಮೆಂಟು ಅಥವಾ ಪ್ಲಾಸ್ಟಿಕ್ ಟ್ಯಾಂಕುಗಳಲ್ಲಿ ನೀರನ್ನು ಸಂಗ್ರಹಿಸಿ, ಪ್ಲಾಸ್ಟಿಕ್ ಪೈಪುಗಳಲ್ಲಿ ತಂದು ನೀರನ್ನು ಬಳಸುತ್ತಿದ್ದೇವೆ.

ಗೋಕರ್ಣ: ಸೂರ್ಯ, ಚಂದ್ರ ಹಾಗೂ ಗಾಳಿಯ ಸಂಸರ್ಗವನ್ನು ಹೊಂದಿರುವ ನೀರು ಮಾತ್ರ ಬಳಕೆಗೆ ಯೋಗ್ಯ. ಸೂರ್ಯ ಕಿರಣ ಕ್ರಿಮಿನಾಶಕ ಹಾಗೂ ಜೀವ ಚೈತನ್ಯದ ಸೆಲೆಯಾದರೆ, ಚಂದ್ರ ಕಿರಣ ನೀರಿಗೆ ತಂಪು ನೀಡುವ ಜತೆಗೆ ಔಷಧೀಯ ಗುಣಗಳನ್ನು ತುಂಬುತ್ತದೆ ಹಾಗೂ ವಾಯುವಿನಿಂದಾಗಿ ನೀರು ಸ್ವಯಂ ಶುದ್ಧಿಯನ್ನು ಹೊಂದುತ್ತದೆ. ಹಾಗಾಗಿ ಸೂರ್ಯ, ಚಂದ್ರ ಮತ್ತು ಗಾಳಿಯ ಸಂಪರ್ಕವಿಲ್ಲದ ನೀರು ಬಳಕೆಗೆ ಅಯೋಗ್ಯ ಎಂದು ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.

ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಬುಧವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ನದಿ ನೀರಿನ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಸೂರ್ಯ, ಚಂದ್ರ ಹಾಗೂ ಗಾಳಿಯ ಸಂಪರ್ಕ ಇಲ್ಲದ ನೀರನ್ನೇ ನಾವು ಬಳಸುತ್ತಿದ್ದೇವೆ. ಸೂರ್ಯನ ಬೆಳಕು ಬೀಳದಂತೆ ಸಿಮೆಂಟು ಅಥವಾ ಪ್ಲಾಸ್ಟಿಕ್ ಟ್ಯಾಂಕುಗಳಲ್ಲಿ ನೀರನ್ನು ಸಂಗ್ರಹಿಸಿ, ಪ್ಲಾಸ್ಟಿಕ್ ಪೈಪುಗಳಲ್ಲಿ ತಂದು ನೀರನ್ನು ಬಳಸುತ್ತಿದ್ದೇವೆ. ಆಧುನಿಕ ವಿಜ್ಞಾನ ಸೂರ್ಯನ ಸಂಪರ್ಕಕ್ಕೆ ಬಂದ ನೀರಿನಲ್ಲಿ ಜೈವಿಕ ಕ್ರಿಯೆ ನಡೆದು ನೀರು ಬಳಕೆಗೆ ಅಯೋಗ್ಯವಾಗುತ್ತದೆ ಎಂದು ಹೇಳುತ್ತದೆ. ಆದರೆ ಅಧುನಿಕ ವಿಜ್ಞಾನದ ಈ ಸೂತ್ರಕ್ಕೆ ವಿರುದ್ಧವಾಗಿಯೇ ಇಲ್ಲಿಯ ವರೆಗಿನ ಮನುಷ್ಯಕುಲ ಬದುಕಿದೆ. ಸೂರ್ಯ- ಚಂದ್ರ - ಗಾಳಿಯ ಸಂಪರ್ಕಕ್ಕೆ ಬಂದ ನೀರನ್ನು ಕುಡಿದೇ ಯುಗಯುಗಾಂತರಗಳಿಂದ ನಮ್ಮ ಪೂರ್ವಜರು ಬದುಕಿದ್ದಾರೆ. ಹಾಗಾಗಿ ಈ ಆಧುನಿಕ ಚಿಂತನೆಯನ್ನು ಮತ್ತು ನಾವು ಕುಡಿಯುವ ನೀರನ್ನು ಒಮ್ಮೆ ಅವಲೋಕಿಸಬೇಕಿದೆ ಎಂದರು.

ಕಳೆದ ೫೦ ವರ್ಷಗಳನ್ನು ಗಮನಿಸಿದರೆ ಆಧುನಿಕ ಚಿಂತನೆಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಹತ್ತು ವರ್ಷಗಳ ಹಿಂದೆ ಇದು ಆರೋಗ್ಯಕರ ಎಂದಿದ್ದನ್ನೇ ಇಂದು ಅನಾರೋಗ್ಯಕರ ಎನ್ನಲಾಗುತ್ತದೆ. ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಆದರೆ ಭಾರತೀಯ ಪರಂಪರೆ ಹೀಗೆ ಬದಲಾಗುವುದಲ್ಲ. ಅದು ಸಾರ್ವಕಾಲಿಕ ಸತ್ಯ. ಐದು ಹತ್ತು ವರ್ಷಗಳಿಗೊಮ್ಮೆ ಬದಲಾಗುವ ಆಧುನಿಕ ಚಿಂತನೆಯನ್ನು ನಂಬಿ ನಮ್ಮ ಜೀವನ ಕ್ರಮವನ್ನು ಬದಲಾಯಿಸಿಕೊಂಡರೆ ನಮ್ಮ ಜೀವನವನ್ನು ಅಪಾಯಕ್ಕೆ ತೆರೆದುಕೊಂಡಂತೆ ಎಂದು ಎಚ್ಚರಿಸಿದರು.

ನಾರಾಯಣ ಭಟ್ ಸಾದಂಗಾಯ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಉದ್ಯಮಿ ನಿಡ್ಲೆ ರಾಮ ಭಟ್, ರವಿಶಂಕರ್ ಭಟ್ ಕಡತೋಕ, ಉದ್ಯಮಿ ಮುರಳೀಧರ್ ಪ್ರಭು, ಸುಬ್ರಾಯ್ ಭಟ್ ಕೊಣಾರೆ, ವಿ.ಎಂ. ಹೆಗಡೆ ಆಲ್ಮನೆ, ದಿನಪ್ರಧಾನರಾಗಿ ಬಾಬು ಹೆಗಡೆ ಅಳವಳ್ಳಿ ದಂಪತಿಗಳು ಉಪಸ್ಥಿತರಿದ್ದರು.

ಭೋವಿ ಸಮಾಜದಿಂದ ಸ್ವರ್ಣ ಪಾದುಕಾಪೂಜೆ: ಶ್ರೀಮಠಕ್ಕೆ ಪರಂಪರೆಯಿಂದ ನಡೆದುಕೊಳ್ಳುತ್ತಿರುವ ಭೋವಿ ಸಮಾಜದಿಂದ ಸ್ವರ್ಣ ಪಾದುಕಾಪೂಜೆ ನಡೆಯಿತು. ಪಾದುಕಾ ಪೂಜೆ ಸ್ವೀಕರಿಸಿ ಭೋವಿ ಸಮಾಜವನ್ನು ಶ್ರೀಗಳು ಆಶೀರ್ವದಿಸಿದರು. ಅನಂತ ಬೈಂದೂರು, ನರಸಿಂಹ ಅಂಕೋಲೆಕರ, ಚಂದ್ರಶೇಖರ ಶಿರಸಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಡಾ: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮರು ಮಾರಾಟ!
ದೇಶಕ್ಕೆ ಆರೋಗ್ಯವಂತ ಸಮಾಜ ಅತ್ಯಗತ್ಯ